
ಹುಬ್ಬಳ್ಳಿ: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ (Hubballi-Ankola Train) ಯೋಜನೆಗೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕಳೆದ ಮೂರು ದಶಕಗಳಿಂದ ಈ ಯೋಜನೆಗಾಗಿ ನಡೆಯುತ್ತಿದ್ದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಇದೀಗ ಯೋಜನೆಗೆ ಎದುರಾಗಿದ್ದ ಅನೇಕ ವಿಘ್ನಗಳು ನಿವಾರಣೆಯಾಗಿ, ಕೊನೆಗೂ ಕೇಂದ್ರ ಸರಕಾರ ಈ ಯೋಜನೆಗೆ ಗ್ರೀನ್ಸಿಗ್ನಲ್ ನೀಡಿದೆ. ಇದರಿಂದಾಗಿ ಕರಾವಳಿ ಹಾಗೂ ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಗೆ (Hubballi) ರೈಲ್ವೆ ಸಂಪರ್ಕ ಸಿಗಲಿದೆ.ಬಯಲು ಸೀಮೆ ಹಾಗೂ ಕರಾವಳಿ ಸಂಪರ್ಕಿಸಿ ವಾಣಿಜ್ಯ ವಹಿವಾಟು ವೃದ್ಧಿಸುವ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಹಲವಾರು ಬಾರಿ ಅಡ್ಡಿ ಆತಂಕಗಳು ಎದುರಾಗಿದ್ದವು.

ಅದರಲ್ಲೂ ವಿಶೇಷವಾಗಿ ಈ ರೈಲು ಮಾರ್ಗ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದ ನಡುವಿನಿಂದ ಹೋಗುವುದರಿಂದ ಅಲ್ಲಿನ ಸಾಕಷ್ಟು ಪ್ರಮಾಣದ ಮರಗಳ ಹನನವಾಗುತ್ತೆ ಅಂತ ಪರಿಸರವಾದಿಗಳು ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದರು. ಈ ಯೋಜನೆಗೆ 1999ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರ ವಾಜಪೇಯಿ ಅವರು ಶಂಕುಸ್ಥಾಪನೆ ಮಾಡಿದ್ದರು.ಕಾಮಗಾರಿ ಆರಂಭವಾಗಿ ಹುಬ್ಬಳ್ಳಿಯಿಂದ ಕಲಘಟಗಿವರೆಗೆ ಸುಮಾರು 34 ಕಿ.ಮೀ ಮಾರ್ಗವನ್ನು ಕೂಡ ನಿರ್ಮಿಸಲಾಗಿತ್ತು. ಆದರೆ ಪರಿಸರವಾದಿಗಳ ತೀವ್ರ ವಿರೋಧದಿಂದಾಗಿ ಈ ಯೋಜನೆ ನಿಂತು ಹೋಗಿತ್ತು. ಕೊನೆಗೆ ಸುಪ್ರಿಂ ಕೋರ್ಟ್ನಲ್ಲಿಯೂ ವಿಚಾರಣೆ ನಡೆದು, ಈ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಅಚ್ಚರಿಯ ಸಂಗತಿ ಅಂದರೆ ಆ ವೇಳೆಯಲ್ಲಿ ಈ ಯೋಜನೆಗೆ 494 ಕೋಟಿ ರೂಪಾಯಿ ವೆಚ್ಚವಾಗುತ್ತೆ ಎಂದು ಅಂದಾಜಿಸಲಾಗಿತ್ತು.





