
ಧಾರವಾಡ: ಕರ್ನಾಟಕ ರಾಜ್ಯ ರೈತ ಸಂಘ ತಾಲೂಕ ಘಟಕ ಕಲಘಟಗಿಯ ಕಾರ್ಯಕರ್ತರು ಇಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಸತತ ಮಳೆಯಿಂದ ಅನೇಕ ಬೆಳೆಗಳು ಕೊಳೆತು ಹಾಳಾಗಿರುವುದರಿಂದ, ರೈತರಿಗೆ ತಕ್ಷಣ ಸೂಕ್ತ ಪರಿಹಾರ ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ರೈತರು ಎದುರಿಸುತ್ತಿರುವ ಇನ್ನಿತರ ಸಮಸ್ಯೆಗಳಲ್ಲಿಯೂ ಸಮರ್ಪಕ ವಿದ್ಯುತ್ ಕೊರತೆ, ರಸಗೊಬ್ಬರಗಳ ಸರಿಯಾದ ವಿತರಣೆ ಇಲ್ಲದಿರುವುದು, ಬೆಲೆಗಳಲ್ಲಿ ನಿಯಂತ್ರಣದ ಕೊರತೆ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಲಾಯಿತು.
ಹೋದ ವರ್ಷ ಮಳೆಗೆ ಹಾನಿಯಾದ ನಿವೇಶನಗಳ ಪರಿಹಾರ ಸಂಪೂರ್ಣವಾಗಿ ವಿತರಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ಪಂಚಾಯಿತಿ ಅಧಿಕಾರಿಗಳು “ಜಿಪಿಎಸ್ ತೊಂದರೆ” ನೆಪ ಹೇಳಿ ಪುನರ್ವಸತಿ ಯಾಪ ಸಮಸ್ಯೆ ಬಾಕಿ ಇಡುವುದರಿಂದ ಜನ ಸಂಕಷ್ಟದಲ್ಲಿದ್ದಾರೆ ಎಂದು ರೈತರು ಆರೋಪಿಸಿದರು.
ಈ ಎಲ್ಲ ಸಮಸ್ಯೆಗಳನ್ನು ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ ತಕ್ಷಣ ಆದೇಶ ನೀಡುವಂತೆ ಮನವಿ ಮೂಲಕ ಜಿಲ್ಲಾಧ್ಯಕ್ಷ ಮಂಜುನಾಥ ಮಾಳಗಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಜ್ಯೋತಿಬಾ ಹುಲಕೋಪ್, ಮಹಿಳಾ ಘಟಕದ ಶಾಂತವ್ವ ಮಡಿವಾಳ, ಕಾರ್ಯದರ್ಶಿ ಮಹದೇವಿ ಕು. ಬ್ಯಾಳ, ಶಿವು ಹೊನ್ನಳ್ಳಿ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.





