
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಂಜುಮನ್ ಇಸ್ಲಾಂ ಸಂಸ್ಥೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಷ್ಟ್ರವೀರ ಟಿಪ್ಪು ಸುಲ್ತಾನ್ ಯುವ ಮಂಡಳ, ಇಂಡಿಪೆಂಡೆಂಟ್ ಸಂಗ್ರಾಮ್ ನ್ಯೂಸ್ ಟ್ರಸ್ಟ್, ಈದಿನ.ಕಾಮ್ ಡಿಜಿಟಲ್ ಮಾಧ್ಯಮ, ಕನ್ನಡ ಸಾಹಿತ್ಯ ವರ್ಧಕ ಮತ್ತು ಸಾಂಸ್ಕೃತಿಕ ಸಂಸ್ಥೆ, ಸ್ಟಾರ್ 74 ನ್ಯೂಸ್ ಚಾನೆಲ್ ಇವರ ಸಂಯುಕ್ತಾಶ್ರಯದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಮತ್ತು ರಾಷ್ಟ್ರವೀರ ದೇಶಪ್ರೇಮಿ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರೀಯ ಭಾವೈಕ್ಯತೆಯಲ್ಲಿ ಯುವಜನರ ಪಾತ್ರ ಘೋಷವಾಕ್ಯದಲ್ಲಿ ‘ವಿಚಾರ ಸಂಕೀರ್ಣ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಎಲ್ಲ ಧರ್ಮಗಳು ಒಗ್ಗಟ್ಟಾಗಿ ಬದುಕುವುದನ್ನು ಕಲಿಸುತ್ತವೆ. ಆ ಹಿನ್ನೆಲೆಯಲ್ಲಿ ಟಿಪ್ಪು ಸುಲ್ತಾನ್ ಆದರ್ಶದ ವ್ಯಕ್ತಿಯಾಗಿದ್ದು, ಕನ್ನಡ ಪ್ರೇಮಿ ಟಿಪ್ಪು ಸುಲ್ತಾನ್ ಅವರ ವಿಚಾರಗಳನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದರು.ರಾಷ್ಟ್ರೀಯ ಭಾವೈಕ್ಯತೆಯಲ್ಲಿ ಯುವಜನರ ಪಾತ್ರ ವಿಚಾರ ಸಂಕೀರ್ಣ ವಿಷಯವಾಗಿ ಡಾ. ಪ್ರೊ. ಎ.ವಾಯ್.ಸಾವಂತ್ ಮಾತನಾಡಿ, ಧಾರವಾಡಕ್ಕೂ ಟಿಪ್ಪುವಿಗೆ ಒಂದು ರೀತಿಯಿಂದ ನಂಟಿದೆ. ಟಿಪ್ಪು ಸುಲ್ತಾನ್ ಆಡಳಿತ ಅವಧಿಯಲ್ಲಿ ಅನೈತಿಕ ಅವ್ಯವಹಾರಕ್ಕೆ ಅವಕಾಶ ಇರಲಿಲ್ಲ. ಟಿಪ್ಪು ಭೂಮಾಪನ ವ್ಯವಸ್ಥೆಯನ್ನು ಧಾರವಾಡದಲ್ಲಿ ಮೊಟ್ಟಮೊದಲಿಗೆ ಜಾರಿಗೆ. ವಿಶೇಷವಾಗಿ ಹೇಳಬೇಕೆಂದರೆ ಧಾರವಾಡದ ಲಕ್ಷ್ಮಿ ವೆಂಕಟೇಶ್ವರ ದೇವರ ಪ್ರತಿಷ್ಠಾನವನ್ನು ಶುಕ್ರವಾರಪೇಟೆಯಲ್ಲಿ ಸ್ವತಹ ಟಿಪ್ಪು ಸುಲ್ತಾನ್ ಪ್ರತಿಷ್ಠಾಪಿಸಿ, ಪೂಜಾರಿಯನ್ನು ನೇಮಿಸಿದರು. ಮತ್ತು ದೇವಸ್ಥಾನಕ್ಕಾಗಿ ನವಲೂರಿನಲ್ಲಿ ನಾಲ್ಕು ಎಕರೆ ಜಮೀನು ದಾನ ಮಾಡಿದರು. ಟಿಪ್ಪು ಮೊಟ್ಟಮೊದಲಿಗೆ ಕ್ಷಿಪಣಿ ಪ್ರಯೋಗವನ್ನು ಪ್ರಾರಂಭಿಸಿದರು. ವಿದೇಶಿಗರು ನೇರವಾಗಿ ನಮ್ಮ ರಾಜ್ಯಕ್ಕೆ ಬರಬಾರದು ಎಂಬ ಉದ್ದೇಶದಿಂದ ಕಾರವಾರದಲ್ಲಿ ಸೀಬರ್ಡ್ ನೌಕಾಲವನ್ನು ನಿರ್ಮಿಸಿದರು ಎಂದು ಮೋಡಿ ಲಿಪಿಯ ಮೂಲಕ ಟಿಪ್ಪುವಿನ ಇತಿಹಾಸವನ್ನು ತಿಳಿಸಿದರು.ಮೇರು ಐಎಎಸ್, ಕೆಎಸ್ ಸ್ಟಡಿ ಸೆಂಟರ್ ನ ನಿರ್ದೇಶಕಿ ಪ್ರಮೀಳಾ ಮೇಟಿ ಮಾತನಾಡಿ, ದೇಶ ಮತ್ತು ನಾಡು ಕಂಡ ಅದ್ಭುತ ದೊರೆ ಟಿಪ್ಪು ಸುಲ್ತಾನ್ ಇತಿಹಾಸದಲ್ಲಿ ಸುಲ್ತಾನಂತ ಮೆರೆದವರು. ಟಿಪ್ಪು ಸುಲ್ತಾನ್ ಯಾರನ್ನು ಕೂಡ ಮತಾಂತರ ಮಾಡಲಿಲ್ಲ. ಶ್ರೀರಂಗಪಟ್ಟಣದ ಮೇಲೆ ದಾಳಿಯಾಗಿ ಬ್ರಾಹ್ಮಣರ ಕೊಲೆಯಾದಾಗ ಅದನ್ನು ಬೇಕಂತಲೇ ಟಿಪ್ಪುವಿನ ಮೇಲೆ ಹೇರುವ ಹುನ್ನಾರ ನಡೆಯಿತು. ಆ ಸಮಯದಲ್ಲಿ ಟಿಪ್ಪು ಸುಲ್ತಾನ್ ಮಲಬಾರ್ ನಲ್ಲಿದ್ದರು. ಮತ್ತು ಈ ಘಟನೆಯ 10 ತಿಂಗಳ ತರವಾಯ ಟಿಪ್ಪು ಶ್ರೀರಂಗಪಟ್ಟಣಕ್ಕೆ ಬಂದರು. ಆ ಸಮಯದಲ್ಲಿ ಟಿಪ್ಪು ಸುಲ್ತಾನರೆ ಹತ್ಯೆ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಯಿತು. ಟಿಪ್ಪುವನ್ನು ನಾವು ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಟಿಪ್ಪು ಶೃಂಗೇರಿಯಲ್ಲಿ ಅಡ್ಡ ಪಲ್ಲಕ್ಕಿ ಉತ್ಸವವನ್ನು ಜಾರಿಗೆ ತಂದರು. ಟಿಪ್ಪು ಸುಲ್ತಾನ್ ರನ್ನು ಕನ್ನಡದ ದೇಶಿಯ ರಾಜ ಮತ್ತು ಗ್ರೇಟ್ ಲೀಡರ್ ಎಂದು ಕರೆಯಬಹುದು. ಟಿಪ್ಪು ಸುಲ್ತಾನ್ ಯಾವತ್ತಿಗೂ ಆಂಗ್ಲರಿಗೆ ಗುಲಾಮನಾಗಿ ಬದುಕಲಿಲ್ಲ. ಬ್ರಿಟಿಷರೇ ಅವರನ್ನು ಮೈಸೂರು ಹುಲಿ ಎಂದು ಕರೆದಿದ್ದಾರೆ. ಅವರು ರಾಜ್ಯದ ಜನರ ಸುಭಿಕ್ಷ ಗಾಗಿ ತಮ್ಮಿಬ್ಬರ ಮಕ್ಕಳನ್ನು ಒತ್ತೆ ಇಟ್ಟರು. ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಅನೇಕ ಅನಿಷ್ಟ ಪದ್ದತಿಗಳನ್ನು ಟಿಪ್ಪು ಸುಲ್ತಾನ್ ವಿರೋಧಿಸಿದ್ದರು ಎಂದು ಹೇಳಿದರು.ಕರ್ನಾಟಕ ಕುಲಪುರೋಹಿತ ರಾಷ್ಟ್ರೀಯ ಆಲೂರು ವೆಂಕಟರಾವ್ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷ ರಂಜಾನ್ ದರ್ಗಾ ಮಾತನಾಡಿ, ಸಾಮಾನ್ಯವಾಗಿ ಕಂದಾಯ ತೆರಿಗೆ ಕಡಿಮೆ ಮಾಡಲು ಧ್ವನಿ ಕೇಳಿಬರುತ್ತದೆ. ಆದರೆ ಟಿಪ್ಪು ಸುಲ್ತಾನರ ಕಾಲದಲ್ಲಿ ರೈತರು ಬಂದು ಅವರಿಗೆ ಕಂದಾಯ ತೆರಿಗೆ ಹೆಚ್ಚಿಸಲು ವಿನಂತಿಸುತ್ತಿದ್ದರು. ಇವತ್ತು ಮಹಿಳೆಯರು ಉಡುವ ರವಿಕೆಯು ಟಿಪ್ಪುವಿನ ಕೊಡುಗೆಯಾಗಿದೆ. 1799 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಟಿಪ್ಪು ಗೆದ್ದರೆ ಇಂಡಿಯಾ ಗೆದ್ದಂತೆ ಎಂದು ಹೇಳಿತ್ತು. ರಣರಂಗದಲ್ಲಿ ಹೋರಾಡಿ ಮಡಿದ ಒಬ್ಬರೇ ಒಬ್ಬ ರಾಜರೆಂದರೆ ಟಿಪ್ಪು ಸುಲ್ತಾನ್. ಅದರಂತೆ ಒಬ್ಬರೇ ಒಬ್ಬ ರಾಣಿ ಎಂದರೆ ಜಾನ್ಸಿ ರಾಣಿ ಲಕ್ಷ್ಮೀಬಾಯಿ ಎಂದು ಹೇಳಬೇಕು. ಉಳುವವನೇ ಭೂಮಿಯ ಒಡೆಯ ಎಂದು ಮೊಟ್ಟ ಮೊದಲಿಗೆ ಸಾರಿದ್ದು ಟಿಪ್ಪು ಸುಲ್ತಾನ್. ಅಂತಹ ರಾಜನನ್ನು ಅರ್ಥೈಸಿಕೊಳ್ಳಬೇಕು ಎಂದರು.ಹುಡಾ ಅಧ್ಯಕ್ಷ ಶಾಕಿರ್ ಸನದಿ ಮಾತನಾಡಿ, ರಾಜ ಪ್ರತಿ ರಾಜರ ಯುದ್ಧಗಳಲ್ಲಿ ಜಾತಿ ಇರಲಿಲ್ಲ ಅಧಿಕಾರ ಮಾತ್ರ ಇತ್ತು. ಟಿಪ್ಪು ಸುಲ್ತಾನ್ ಒಬ್ಬ ಒಳ್ಳೆಯ ಆಡಳಿತಗಾರ ಮತ್ತು ವಿಶೇಷವಾಗಿ ರೈತ ಆಗಿದ್ದರು. ಇಂತಹ ಕಾರ್ಯಕ್ರಮಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.ಜಾನಪದ ವಿಶ್ವವಿದ್ಯಾಲಯದ ಡಾ. ವೆಂಕನಗೌಡ ಪಾಟೀಲ್ ಮಾತನಾಡಿ, ನಾವಿಂದು ಅತ್ಯಂತ ದುರಂತದ ದಿನಗಳಲ್ಲಿ ಬದುಕುತ್ತಿದ್ದೇವೆ. ಇತಿಹಾಸದ ಪ್ರಚಾರದ ವಾರಸುದಾರರು ಆಗಬೇಕಿದೆ. ದಲಿತರು, ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆದ ಟಿಪ್ಪು ಸುಲ್ತಾನ್ ನಂತಹ ರಾಜನ ಹೆಸರು ಕೆಡಿಸುವ ಕೆಲಸವಾಗುತ್ತಿದೆ. ಸ್ವಾತಂತ್ರ್ಯ ಹೋರಾಟವನ್ನು ವಿರೋಧಿಸಿದ್ದವರು ಇವತ್ತು ಮೆರೆಯುತ್ತಿದ್ದಾರೆ. ಇದು ದುರಂತದ ಸಂಗತಿ. ಇತಿಹಾಸದ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕಿದೆ. ಟಿಪ್ಪು ಸುಲ್ತಾನರ ಇತಿಹಾಸವನ್ನು ನಾಶ ಮಾಡುವ ಸಲುವಾಗಿ ಕೆಲವರು ಅವರ ವಿರುದ್ಧ ಪ್ರಚಾರ ಶುರು ಮಾಡಿದರು. ವಿದ್ಯಾರ್ಥಿಗಳು ಸುಳ್ಳು ಹರಡುವ ಶಕ್ತಿಗಳಿಂದ ಎಚ್ಚರ ವಹಿಸಬೇಕು. ವಾಟ್ಸಾಪ್ ಗಳು ಸುಳ್ಳು ಹರಡುವ ಫ್ಯಾಕ್ಟರಿಗಳಾಗಿವೆ. ಅದರ ಬಗ್ಗೆ ಜಾಗರೂಕತೆಯಿಂದ ಇರಬೇಕು. ಟಿಪ್ಪು ಸುಲ್ತಾನ್ ಕೇವಲ ವ್ಯಕ್ತಿ ಮಾತ್ರವಲ್ಲ. ಅವರ ಆಡಳಿತ, ಆದರ್ಶದ ಬದುಕನ್ನು ಇವತ್ತಿನ ರಾಜಕಾರಣಿಗಳು ಪ್ರೇರಣೆಯಾಗಿ ಸ್ವೀಕರಿಸಬೇಕು. ಟಿಪ್ಪು ಸುಲ್ತಾನ್ ಇವತ್ತಿಗೂ ಪ್ರಸ್ತುತವಾಗಿದ್ದಾರೆ ಎಂದು ಹೇಳಿದರು.ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ದೊಡ್ಡವಾಡ ಮಾತನಾಡಿ, ಇತಿಹಾಸವನ್ನು ತಿರುಚುವ ಕೆಲಸವಾಗುತ್ತಿದೆ ಇದರಿಂದ ಯುವಕರನ್ನು ದಾರಿ ತಪ್ಪಿಸುವ ಹುನ್ನಾರ ನಡೆಯುತ್ತಿದೆ. ಯುವಕರು ಮನಸ್ಸು ಮಾಡಿದರೆ ಮತ್ತೊಂದು ಕ್ರಾಂತಿಯೇ ಆಗಬಹುದು. ಮೊಹರಂ ಸಂದರ್ಭದಲ್ಲಿ ಪ್ರಧಾನಿ ಮೋದಿಯವರನ್ನು ಕರೆತರಬೇಕಿದೆ. ಅದರಿಂದ ನಾವೆಲ್ಲ ಒಗ್ಗಟ್ಟಿನಿಂದ, ಭಾವೈಕ್ಯತೆಯಿಂದ ಬದುಕುತ್ತಿದ್ದೇವೆ ಎಂಬುದು ಅವರಿಗೆ ಅರ್ಥೈವಾಗುತ್ತದೆ. ಸರ್ಕಾರವು ಏಕೆ ಟಿಪ್ಪುವನ್ನು ಭಾವೈಕ್ಯತಾ ವೀರನೆಂದು ನೆನಪಿಸಿಕೊಳ್ಳುತ್ತಿಲ್ಲ. ಮತ್ತು ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಸರ್ಕಾರವು ಪ್ರಶಸ್ತಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.ಅಧ್ಯಕ್ಷತೆ ವಹಿಸಿದ್ದ ಬಿ.ಎ.ಜಾಗಿರದಾರ್ ಮಾತನಾಡಿ, ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದರೆ ದೇಶ ಒಂದಾಗುತ್ತದೆ. ಇತಿಹಾಸದ ಪ್ರಜ್ಞೆಯಿಂದ ಬದುಕಬೇಕು. ಸಂವಿಧಾನದ ಅಡಿಯಲ್ಲಿ ನಡೆಯಬೇಕು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಎಮ್ ಕೆ ನದಾಫ್, ಕುಮಾರಿ ಮುಸ್ಕಾನ್ ನದಾಫ್, ಮಹಮ್ಮದ ಅಲಿ ಗುಡೂಭಾಯಿ, ಅಶ್ರಫ್ ಕಲಘಟಗಿ ವೇದಿಕೆ ಮೇಲಿದ್ದರು. ವಿದ್ಯಾರ್ಥಿಗಳು ಭಾಗವಸಿದ್ದರು. ಪ್ರಮೀಳಾ ಜಕ್ಕಣ್ಣವರ್ ಭಾವೈಕ್ಯತೆಯ ಗೀತೆಯನ್ನು ಹಾಡಿದರು. ಅನಿಲ್ ಮೈತ್ರಿ ಮತ್ತು ಸಂಗಡಿಗರು ಟಿಪ್ಪು ಸುಲ್ತಾನ್ ಲಾವಣಿ ಪದಗಳನ್ನು ಹಾಡುವುದರ ಜೊತೆಗೆ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಸಾಪ ತಾಲೂಕು ಅಧ್ಯಕ್ಷ ಮಹಾಂತೇಶ್ ನರೇಗಲ್ ನಿರೂಪಿಸಿದರು.





