ಲೀಡ್ಸ್: ಇಂಗ್ಲೆಂಡ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ (IND vs ENG) ಎರಡನೇ ದಿನ ಭರ್ಜರಿ ಶತಕ ಸಿಡಿಸಿದ ಭಾರತ ತಂಡದ ಉಪ ನಾಯಕ ರಿಷಭ್ ಪಂತ್ (Rishabh Pant) ಅವರನ್ನು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar) ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ವೇಳೆ ಅನಗತ್ಯ ಹೊಡೆತಗಳಿಗೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ದಾಗ ರಿಷಭ್ ಪಂತ್ ಅವರನ್ನು ಸುನೀಲ್ ಗವಾಸ್ಕರ್, “ಮೂರ್ಖ, ಮೂರ್ಖ, ಮೂರ್ಖ,” ಎಂದು ಟೀಕಿಸಿದ್ದರು. ಇದೀಗ ಲೀಡ್ಸ್ ಹೆಡಿಂಗ್ಲೆಯಲ್ಲಿ ಶತಕ ಸಿಡಿಸಿದ ಬೆನ್ನಲ್ಲೆ “ಸೂಪರ್, ಸೂಪರ್, ಸೂಪರ್” ಎಂದು ಸುನೀಲ್ ಗವಾಸ್ಕರ್ ಶ್ಲಾಘಿಸಿದ್ದಾರೆ. ತಮ್ಮ ಟೆಸ್ಟ್ ವೃತ್ತಿ ಜೀವನದ ಏಳನೇ ಶತಕ ಸಿಡಿಸಿದ ರಿಷಭ್ ಪಂತ್, ಟೆಸ್ಟ್ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ಬರೆದಿದ್ದರು.
ಶನಿವಾರ ಬೆಳಗ್ಗೆ ನಾಯಕ ಶುಭಮನ್ ಗಿಲ್ ಜೊತೆ ಕ್ರೀಸ್ಗೆ ಬಂದ ರಿಷಭ್ ಪಂತ್ ಸ್ಪೋಟಕ ಬ್ಯಾಟ್ ಮಾಡಿದರು. ಇಂಗ್ಲೆಂಡ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಅವರು ಆಡಿದ 178 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 134 ರನ್ಗಳನ್ನು ಬಾರಿಸಿದರು. ಅಲ್ಲದೆ ನಾಯಕ ಶುಭಮನ್ ಗಿಲ್ ಜೊತೆ ನಾಲ್ಕನೇ ವಿಕೆಟ್ಗೆ 209 ರನ್ಗಳ ಜೊತೆಯಾಟವನ್ನು ಆಡಿದ್ದರು. ತಮ್ಮ ವಿಭಿನ್ನ ಶೈಲಿಯ ಹೊಡೆತಗಳಿಂದ ಸಿಕ್ಸರ್ ಹಾಗೂ ಬೌಂಡರಿಗಳನ್ನು ಬಾರಿಸುವ ಮೂಲಕ ರಿಷಭ್ ಪಂತ್ ಅಭಿಮಾನಿಗಳನ್ನು ಭರ್ಜರಿಯಾಗಿ ರಂಜಿಸಿದ್ದಾರೆ.
IND vs ENG: ಕಮ್ಬ್ಯಾಕ್ ಪಂದ್ಯದಲ್ಲಿ ಸೊನ್ನೆ ಸುತ್ತಿ ನಿರಾಶೆ ಮೂಡಿಸಿದ ಕರುಣ್ ನಾಯರ್!
ಮೂರ್ಖ, ಮೂರ್ಖ, ಮೂರ್ಖ ಎಂದಿದ್ದ ಗವಾಸ್ಕರ್
ಈ ವರ್ಷದ ಆರಂಭದಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ದದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಬಗ್ಗೆ ಆಕ್ರೋಶಗೊಂಡಿದ್ದರು. ಈ ಪಂದ್ಯದಲ್ಲಿ ಅವರು ಫೀಲ್ಡರ್ ಇದ್ದರೂ ಅನಗತ್ಯವಾಗಿ ಸ್ಕೂಪ್ ಶಾಟ್ ಹೋಗಿ ವಿಕೆಟ್ ಒಪ್ಪಿಸಿದ್ದರು. ಈ ವೇಳೆಯೂ ಕಾಮೆಂಟರಿ ಮಾಡುತ್ತಿದ್ದ ಗವಾಸ್ಕರ್, “ಸ್ಟುಪಿಡ್, ಸ್ಟುಪಿಡ್, ಸ್ಟುಪಿಡ್! ಅಲ್ಲಿ ಇಬ್ಬರು ಫೀಲ್ಡರ್ಗಳಿದ್ದಾರೆ, ಆದರೂ ಆ ಕಡೆ ಶಾಟ್ ಆಡಲು ಹೋಗುತ್ತಿದೀರಿ. ಕಳೆದ ಶಾಟ್ ಅನ್ನು ನೀವು ಮಿಸ್ ಮಾಡಿಕೊಂಡಿದ್ದೀರಿ. ನೀವು ಎಲ್ಲಿ ಕ್ಯಾಚ್ ಕೊಟ್ಟಿದ್ದೀರಿ ಎಂಬುದನ್ನು ನೀವೇ ನೋಡಿ.
ಡೀಪ್ ಥರ್ಡ್ ಮ್ಯಾನ್ಗೆ ಕ್ಯಾಚ್ ಕೊಟ್ಟಿದ್ದೀರಿ. ನೀವೇ ನಿಮ್ಮ ವಿಕೆಟ್ ಅನ್ನು ಕೊಟ್ಟಿದ್ದೀರಿ. ಅದರಲ್ಲಿಯೂ ಭಾರತ ತಂಡದ ಸನ್ನಿವೇಶ ಉತ್ತಮವಾಗಿರಲಿಲ್ಲ. ನೀವು ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ,” ಎಂದು ಸುನೀಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೂಪರ್, ಸೂಪರ್, ಸೂಪರ್ ಎಂದ ಸನ್ನಿ
ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಶೋಯೆಬ್ ಬಶೀರ್ಗೆ ಸಿಕ್ಸರ್ ಬಾರಿಸುವ ಮೂಲಕ ರಿಷಭ್ ಪಂತ್ ತಮ್ಮ ಶೈಲಿಯಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಈ ವೇಳೆ ರಿಷಭ್ ಪಂತ್ ಅವರು ಫ್ರಂಟ್ ಫ್ಲಿಪ್ ಮಾಡುವ ಮೂಲಕ ವಿಭಿನ್ನ ಶೈಲಿಯಲ್ಲಿ ಸಂಭ್ರಮಿಸಿದರು.
ಈ ವೇಳೆ ಕಾಮೆಂಟರಿ ಬಾಕ್ಸ್ನಲ್ಲಿ ಕುಳಿತಿದ್ದ ಸುನೀಲ್ ಗವಾಸ್ಕರ್, “ಹೌದು, ಸೂಪರ್, ಸೂಪರ್, ಸೂಪರ್. ನಿಸ್ಸಂಶಯವಾಗಿ ಯಂಗ್ ಬ್ಯಾಟ್ಸ್ಮನ್ನಿಂದ ಭಯಾನಕ ಬ್ಯಾಟಿಂಗ್,” ಎಂದು ರಿಷಭ್ ಪಂತ್ ಬಗ್ಗೆ ಗುಣಗಾನ ಮಾಡಿದರು. ರಿಷಭ್ ಪಂತ್, ಶುಭಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಅವರ ಶತಕಗಳ ಬಲದಿಂದ ಭಾರತ ತಂಡ ಪ್ರಥಮ ಇನಿಂಗ್ಸ್ನಲ್ಲಿ 471 ರನ್ಗಳಿಗೆ ಆಲ್ಔಟ್ ಆಯಿತು.