ಬೆಂಗಳೂರು: ʼಕೆಜಿಎಫ್ʼ (KGF) ಸರಣಿ, ‘ಕಾಂತಾರ’ (Kantara) ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಕಂಪು ಪಸರಿಸಿದ್ದ ಸ್ಯಾಂಡಲ್ವುಡ್ನ ಹೆಮ್ಮೆಯ ಚಿತ್ರ ನಿರ್ಮಾಣ ಸಂಸ್ಥೆ ವಿಜಯ್ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲ್ಮ್ಸ್ (Hombale Films) ಇದೀಗ ಪ್ರೇಕ್ಷಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 7 ಚಿತ್ರಗಳನ್ನು ಘೋಷಿಸಿದೆ. ವಿಶೇಷ ಎಂದು ಇವು 2 ವರ್ಷಗಳ ಅಂತರದಲ್ಲಿ ತೆರೆ ಕಾಣಲಿವೆ. ಈ ಪೈಕಿ ಮೊದಲ ಸಿನಿಮಾ ʼಮಹಾವತಾರ್ ನರಸಿಂಹʼ (Mahavatar Narsimha) ಮುಂದಿನ ತಿಂಗಳೇ ಬಿಡುಗಡೆಯಾಗಲಿದೆ.
ಇವೆಲ್ಲ ಮಹಾವತಾರ್ ಸೀರಿಸ್ನ ಆ್ಯನಿಮೇಷನ್ ಚಿತ್ರಗಳು. ಈ ಮೂಲಕ ಭಗವಾನ್ ವಿಷ್ಣುವಿನ ಅವತಾರವನ್ನು ಹೊಂಬಾಳೆ ಫಿಲ್ಮ್ಸ್ ಅದ್ಧೂರಿಯಾಗಿ ತೆರೆ ಮೇಲೆ ತರಲಿದೆ. ಈ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ನೀಡಿದ್ದು, 3ಡಿ ಮಾದರಿಯಲ್ಲಿ ಸಿನಿಮಾಗಳು ರಿಲೀಸ್ ಆಗಲಿವೆ.
ಹೊಂಬಾಳೆ ಫಿಲ್ಮ್ಸ್ನ ಎಕ್ಸ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: Hombale Films: ಬಿಗ್ ಅಪ್ಡೇಟ್ ನೀಡಿದ ಹೊಂಬಾಳೆ ಫಿಲ್ಮ್ಸ್; ಹೃತಿಕ್ ರೋಷನ್ ಜತೆಗೆ ಬಾಲಿವುಡ್ ಚಿತ್ರ ಘೋಷಣೆ
ಹೊಂಬಾಳೆ ಫಿಲ್ಮ್ಸ್ ಹೇಳಿದ್ದೇನು?
ʼʼಸಾಧ್ಯತೆಗಳಿಗೆ ಅಂತ್ಯವಿಲ್ಲ ಮತ್ತು ನಮ್ಮ ಕಥೆಗಳನ್ನು ಪರದೆಯ ಮೇಲೆ ಜೀವಂತವಾಗಿ ನೋಡಲು ನಾವು ಉತ್ಸುಕರಾಗಿದ್ದೇವೆ. ಮಹಾಕಾವ್ಯದ ಸಿನಿಮೀಯ ಸವಾರಿಗಾಗಿ ಸಿದ್ಧರಾಗಿʼʼ ಎಂದು ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ. ಮುಂದುವರಿದು, ʼʼಕ್ಲೀಮ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಮಹಾವತಾರ್ ಸಿನಿಮಾಟಿಕ್ ಯುನಿವರ್ಸ್ ಅನ್ನು ಹೊಂಬಾಳೆ ಫಿಲ್ಮ್ಸ್ ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದೆʼʼ ಎಂದು ಬರೆದುಕೊಂಡಿದೆ.
ʼʼಭಗವಾನ್ ವಿಷ್ಣುವಿನ 10 ದೈವಿಕ ಅವತಾರಗಳನ್ನು ಒಳಗೊಂಡ, 1 ದಶಕಕ್ಕೂ ಹೆಚ್ಚು ಕಾಲ ರಿಲೀಸ್ ಆಗಲಿರುವ ನಮ್ಮ ಚಿತ್ರಗಳನ್ನು ಪ್ರಕಟಿಸಲು ರೋಮಾಂಚನಗೊಂಡಿದ್ದೇವೆʼʼ ಎಂದು ಹೇಳಿದೆ. ಆ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಲು ಸಜ್ಜಾಗಿದೆ.
ರಿಲೀಸ್ ಅಗಲಿರುವ ಚಿತ್ರಗಳು
- ಮಹಾವತಾರ್ ನರಸಿಂಹ (2025ರ ಜು. 25)
- ಮಹಾವತಾರ್ ಪರಶುರಾಮ್ (2027)
- ಮಹಾವತಾರ್ ರಘುನಂದನ್ (2029)
- ಮಹಾವತಾರ್ ದ್ವಾರಕಾದೀಶ್ (2031)
- ಮಹಾವತಾರ್ ಗೋಕುಲಾನಂದ (2033)
- ಮಹಾವತಾರ್ ಕಲ್ಕಿ ಪಾರ್ಟ್ 1 (2035)
- ಮಹಾವತಾರ್ ಕಲ್ಕಿ ಪಾರ್ಟ್ 2 (2037)
ಮಹಾವತಾರ್ ನರಸಿಂಹ 2025ರ ಜು. 25ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಇದು 3ಡಿ ಮಾದರಿಯಲ್ಲಿ5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಬಗ್ಗೆ ಚಿತ್ರತಂಡ ಶೀಘ್ರದಲ್ಲಿಯೇ ಹೆಚ್ಚಿನ ಮಾಹಿತಿ ಪ್ರಕಟಿಸುವುದಾಗಿ ತಿಳಿಸಿದೆ.
ಬಾಲಿವುಡ್ಗೂ ಕಾಲಿಟ್ಟ ಹೊಂಬಾಳೆ ಫಿಲ್ಮ್ಸ್
ಕನ್ನಡ, ತೆಲುಉ, ತಮಿಳು, ಮಲಯಾಳಂ ಚಿತ್ರಗಲನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ಬಾಲಿವುಡ್ಗೆ ಪ್ರವೇಶಿಸಿದೆ. ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್, ಗ್ರೀಕ್ ಗಾಡ್ ಖ್ಯಾತಿಯ ಹೃತಿಕ್ ರೋಷನ್ ಜತೆಗೆ ಮುಂದಿನ ಚಿತ್ರ ಘೋಷಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಭಿಮಾನಿಗಳ ಕುತೂಹಲ, ನಿರೀಕ್ಷೆ ಹೆಚ್ಚಿಸಿತ್ತು. ಈ ಚಿತ್ರವನ್ನು ಹಾಲಿವುಡ್ ಮಾದರಿಯಲ್ಲಿ ನಿರ್ಮಿಸುವ ಬಗ್ಗೆಯೂ ತಿಳಿಸಿತ್ತು. ಆದರೆ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ಹೊಂಬಾಳೆ ಫಿಲ್ಮ್ಸ್ ಇದೀಗ ಮತ್ತೊಂದು ಮಹತ್ವದ ಘೋಷಣೆ ಹೊರಡಿಸಿದೆ. ಜತೆಗೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಬಹುನಿರೀಕ್ಷಿತ ʼಕಾಂತಾರ: ಚಾಪ್ಟರ್ 1′ ಈ ವರ್ಷದ ಅ. 2ರಂದು ರಿಲೀಸ್ ಆಗಲಿದೆ.