ಚಿಕ್ಕಬಳ್ಳಾಪುರ: ಅನ್ಯಾಯವನ್ನು ಮರೆತು ಕ್ಷಮಿಸುವ ಗುಣ ದೊಡ್ಡದು. ಆದರೆ ದೇಶಕ್ಕೆ ಮಾಡಿದ ಘನಘೋರ ಅನ್ಯಾಯವನ್ನು ಯಾರೂ ಮರೆಯ ಬಾರದು ಅದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
ನಗರದ ವಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕ ಏರ್ಪಡಿ ಸಿದ್ದ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 50 ವರ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂದಿನ ರಾಷ್ಟ್ರಪತಿಗಳಾಗಿದ್ದ ಫಕ್ರುದ್ದೀನ್ ಆಲಿ ಅಹ್ಮದ್ ಮೂಲಕ, ಬಲವಂತದಿಂದ ಇಂದಿರಾ, ಎಮರ್ಜೆನ್ಸಿ ಘೋಷಣೆ ಮಾಡಿದ್ದರು. ವಿಪಕ್ಷದ ನೂರಾರು ನಾಯಕರನ್ನು ಬಂಧನದಲ್ಲಿ ಇಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿತ್ತು ಎಂದರು.
ಇದನ್ನೂ ಓದಿ: Chikkaballapur News: ಹೋರಾಟಗಾರರ ಬಂಧನ: ಸಂಯುಕ್ತ ಹೋರಾಟ ಸಮಿತಿ ಖಂಡನೆ, ಪ್ರತಿಭಟನೆ
ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಆಲಿ ಅಹ್ಮದ್ ಮೂಲಕ ಇಂದಿರಾ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ’ತುರ್ತು ಪರಿಸ್ಥಿತಿ’ ಎನ್ನುವ ಕಪ್ಪುಚುಕ್ಕೆಯನ್ನು ಇಟ್ಟಿದ್ದರು. ಭಾರತೀಯರನ್ನು ಹಕ್ಕನ್ನು ಕಸಿದುಕೊಂಡ ಆ ಕರಾಳ ದಿನಕ್ಕೆ ಇಂದಿಗೆ ಐವತ್ತು ವರ್ಷ.1947ರಲ್ಲಿ ಸ್ವಾತಂತ್ರ್ಯ ಬಂದ ನಂತರ ಇಡೀ ದೇಶದ ಅತ್ಯಂತ ಕರಾಳತೆಯ ಅಧ್ಯಾಯವೇ ತುರ್ತು ಪರಿಸ್ಥಿತಿ (ಎಮರ್ಜೆನ್ಸಿ) ಎಂದರು .
ಜೂನ್ 25ರ ಆ ದಿನದಂದು, ಭಾರತದ ಸಂವಿಧಾನದ 352ನೇ ವಿಧಿಯನ್ನು ಪ್ರಯೋಗಿಸಿ, ರಾಷ್ಟ್ರ ಪತಿಗಳ ಮೂಲಕ ಎಮರ್ಜೆನ್ಸಿಯನ್ನು ಘೋಷಿಸಲಾಯಿತು. ರಾಷ್ಟ್ರಪತಿಗಳಿಗೂ ಒತ್ತಡವನ್ನು ಹಾಕಿ ಇದನ್ನು ಜಾರಿಗೆ ತರಲಾಯಿತು. 21 ತಿಂಗಳು ಅಂದರೆ, ಮಾರ್ಚ್ 21, 1977ರಲ್ಲಿ ಇದನ್ನು ಹಿಂದಕ್ಕೆ ಪಡೆಯಲಾಯಿತು. ಈ ಅವಧಿಯಲ್ಲಿ ದೇಶದ ಜನತೆ ಪಡಬಾರದ ಕಷ್ಟವನ್ನು ಪಟ್ಟರು. ಬಲಾಢ್ಯ ರಾಜಕೀಯ ಕುಟುಂಬದ ಅಕ್ಷರಸಃ ಅಧಿಕಾರದ ದುರುಪಯೋಗದ ಪರಮಾವಧಿ ಇದಾಗಿತ್ತು ಎಂದು ಹೇಳಿದರು.
ಈ ಅವಧಿಯಲ್ಲಿ ಭಾರತೀಯರು ಕಂಡಿದ್ದು ಕುಟುಂಬ ಸರ್ವಾಧಿಕಾರಿ ಆಡಳಿತ, ಪ್ರಜಾಪ್ರಭುತ್ವ ವ್ಯವಸ್ಥೆಯ ದಮನ, ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ, ಹಿರಿಯರು ಕಿರಿಯರು ಎನ್ನದೇ ಸಿಕ್ಕಸಿಕ್ಕವರಿಗೆ ಜೈಲುವಾಸ, ನಿರಂಕುಶ ಅಧಿಕಾರ, ಮಾಧ್ಯಮಗಳ ಮೇಲೆ ದಾಳಿ, ನ್ಯಾಯಾಂಗ ವ್ಯವಸ್ಥೆಯ ಅಪಹಾಸ್ಯ, ಭಿನ್ನಾಭಿಪ್ರಾಯ ಮುನ್ನಲೆಗೆ ಬರದೇ ಇರಲು ರಾಜ್ಯಗಳ ಮೇಲೆ ದಬ್ಬಾಳಿಕೆ ಮಾಡಿದರು ಎಂದು ತಿಳಿದರು.
ಮಾಜಿ ಸಚಿವ ಹಾಗೂ ರಾಜಾಜಿ ನಗರ ವಿಧಾನ ಸಭಾ ಕ್ಷೇತ್ರದ ಎಸ್.ಸುರೇಶ್ ಕುಮಾರ್ ಮಾತ ನಾಡಿ, ಭಾರತದ ಸಂವಿಧಾನಕ್ಕೆ ಕಪ್ಪುಚುಕ್ಕೆ ಬರೆದ ತುರ್ತು ಪರಿಸ್ಥಿತಿಗೆ 50 ವರ್ಷ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಸರ್ವಾಧಿಕಾರಿ ಧೋರಣೆಯಿಂದ ಜಾರಿಗೆ ಬಂದ ಎಮರ್ಜೆನ್ಸಿ, ಭಾರತದ ಇತಿಹಾಸಕ್ಕೆ ಕರಾಳ ಅಧ್ಯಾಯವಾಗಿದೆ.
1971ರ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಾರ್ಟಿಯು ಅಭೂತಪೂರ್ವ ಗೆಲುವನ್ನೇನೋ ಸಾಧಿಸಿತು. ಆದರೆ, ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆದ ಬಗ್ಗೆ ವ್ಯಾಪಕವಾದ ಟೀಕೆ ವ್ಯಕ್ತವಾಗಿತ್ತು. 1975ರಲ್ಲಿ ಐತಿಹಾಸಿಕ ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್, ಚುನಾವಣೆಯಲ್ಲಿನ ಅಕ್ರಮಕ್ಕಾಗಿ ಇಂದಿರಾ ಗಾಂಧಿಯನ್ನು ’ದೋಷಿ’ ಎನ್ನುವ ತೀರ್ಪನ್ನು ನೀಡಿತು. ಯಾವುದೇ ಸಾಂವಿಧಾನಿಕ ಹುದ್ದೆಯನ್ನು 6 ವರ್ಷ ಅಲಂಕರಿಸದಂತೆ ಅನರ್ಹಗೊಳಿಸಿತು.ಇದು, ಜಯಪ್ರಕಾಶ್ ಹೋರಾಟಕ್ಕೆ ಸಿಕ್ಕ ಗೆಲುವು ಎಂದು ವ್ಯಾಖ್ಯಾನಿಸ ಲಾಯಿತು.
ಇದಾದ ನಂತರ, ಸರ್ವೋಚ್ಚ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿದರೂ, ಅಲ್ಲೂ ಇಂದಿರಾ ಗಾಂಧಿಗೆ ಸೋಲಾಯಿತು. ಜೂನ್ 25, 1975ರಂದು ರಾಷ್ಟ್ರಪತಿಗಳ ಮೂಲಕ ಇಂದಿರಾ ಗಾಂಧಿ, ತುರ್ತು ಪರಿಸ್ಥಿತಿ ಘೋಷಿಸಿದರು. ಮೂರು ಗಂಟೆಗಳ ಕಾಲ, ಎಲ್ಲಾ ಪ್ರಮುಖ ಪತ್ರಿಕೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಯಿತು. ಆರು ತಿಂಗಳಿಗೊಮ್ಮೆ ಇದನ್ನು ಮರುಪರಿಶೀಲಿಸುವ ನಿರ್ಧಾರಕ್ಕೆ ಬರಲಾಯಿತು.ಎಮರ್ಜೆನ್ಸಿ ಘೋಷಿಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಇನ್ನಷ್ಟು ಅಧಿಕಾರ ಸಿಕ್ಕಂತಾಯಿತು. ನಾಗರೀಕ ಸ್ವಾತಂತ್ರ್ಯವನ್ನು ರದ್ದುಗೊಳಿಸಲಾಯಿತು. ವಾಕ್ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಕಡಿವಾಣ ಹಾಕಲಾಯಿತು. ಸಾರ್ವಜನಿಕವಾಗಿ ಸಭೇ ಸೇರುವುದಕ್ಕೂ ನಿಷೇಧವನ್ನು ಹೇರಲಾಯಿತು. ದೇಶಕ್ಕೆ ಎದುರಾಗಿರುವ ಬೆದರಿಕೆ, ಸುವ್ಯವಸ್ಥೆ, ಸ್ಥಿರತೆ ಮತ್ತು ರಾಷ್ಟ್ರೀಯ ಭದ್ರತೆಯ ಹಿನ್ನಲೆಯಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ ಎಂದು ಕಾಂಗ್ರೆಸ್, ಎಮರ್ಜೆ ನ್ಸಿ ಘೋಷಣೆಯನ್ನು ಸಮರ್ಥಿಸಿಕೊಂಡಿತು.
ಇಂದಿರಾ ಗಾಂಧಿ, ಸರ್ವಾಧಿಕಾರಿ ಸರ್ಕಾರ ಮತ್ತು ಎಮರ್ಜೆನ್ಸಿ ವಿರೋಧಿಸಿದ ರಾಜಕೀಯ ನಾಯಕ ರನ್ನು ಬಂಧಿಸಲು ಸೂಚಿಸಿದರು. ಜಯಪ್ರಕಾಶ್ ನಾರಾಯಣ್, ಅಟಲ್ ಬಿಹಾರಿ ವಾಜಪೇಯಿ, ಮೊರಾರ್ಜಿ ದೇಸಾಯಿ, ಎಲ್ ಕೆ ಆಡ್ವಾಣಿ ಮುಂತಾದ ನಾಯಕರನ್ನು ಜೈಲಿಗೆ ಅಟ್ಟಲಾಯಿತು. ಸಾವಿರಾರು ಹೋರಾಟಗಾರರನ್ನು ಯಾವುದೇ ಸಕಾರಣವಿಲ್ಲದೇ ಅರೆಸ್ಟ್ ಮಾಡಲಾಯಿತು.
ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿ, ಬಲವಂತವಾಗಿ ಲಕ್ಷಾಂತರ ಪುರುಷರ ಮತ್ತು ಮಹಿಳೆಯರ ಸಂತಾನಹರಣವನ್ನು ಮಾಡಿಸಿದರು. ನ್ಯಾಯಾಂಗದ ಪಾತ್ರ ದುರ್ಬಲಗೊಳ್ಳಲು ಆರಂಭವಾಯಿತು.ವಿರೋಧ ಪಕ್ಷಗಳು ಧರಣಿ, ಪ್ರತಿಭಟನೆ, ಸಾರ್ವಜನಿಕ ಸಭೆ ನಡೆಸದಂತೆ ವಿಜಯರಾಜೆ ಸಿಂಧಿಯಾ, ಜಯಪ್ರಕಾಶ್ ನಾರಾಯಣ್, ಮುಲಾಯಂ ಸಿಂಗ್ ಯಾದವ್, ರಾಜ್ ನಾರಾಯಣ್, ಮೊರಾರ್ಜಿ ದೇಸಾಯಿ, ಚೌಧುರಿ ಚರಣ್ ಸಿಂಗ್, ಜೀವತ್ ರಾಮ್ ಕೃಪಲಾನಿ, ಜಾರ್ಜ್ ಫೆರ್ನಾಂಡಿಸ್, ಅನಂತರಾಮ್ ಜೈಸ್ವಾಲ್, ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಆಡ್ವಾಣಿ, ಅರುಣ್ ಜೇಟ್ಲಿ, ಜೈ ಕಿಶನ್ ಗುಪ್ತಾ, ಸತ್ಯೇಂದ್ರ ನಾರಾಯಣ ಸಿನ್ಹಾ, ಜೈಪುರದ ರಾಣಿ ಗಾಯತ್ರಿ ದೇವಿ, ವಿಎಸ್ ಅಚ್ಯುತಾನಂದನ್, ಜ್ಯೋತಿಬಸು, ಲಾಲೂ ಪ್ರಸಾದ್ ಯಾದವ್, ಶರದ್ ಯಾದವ್, ರಾಮ್ ವಿಲಾಸ್ ಪಾಸ್ವಾನ್, ಪ್ರಕಾಶ್ ಕಾರಟ್, ಸೀತಾರಾಂ ಯಚೂರಿ, ಡಿಎಂಕೆ ಪಾರ್ಟಿಯ ಹಲವು ನಾಯಕರು ಸೇರಿದಂತೆ ನೂರಾರು ರಾಜಕೀಯ ನಾಯಕರನ್ನು ಬಂಧಿಸ ಲಾಯಿತು. ಇದೇ ವೇಳೆ ಭೂಗತವಾಗಿ ಕಾರ್ಯ ನಿರ್ವಹಿಸುತ್ತಿದ್ದ ನನ್ನ ಬಂಧನವಾಗಿ ನಾನು ಸಹಾ 15 ತಿಂಗಳು ಜೈಲುವಾಸ ಅನುಭವಿಸುವಂತಾಯಿತು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಭೂಗತ ಚಟುವಟಿಕೆ ಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಹಾಗೂ ನಿಷೇಧಿತ ಪತ್ರಿಕೆಗಳನ್ನು ಹಂಚಿ ದೇಶ ಪ್ರೇಮಿಗಳಲ್ಲಿ ಜಾಗೃತಿ ಮೂಡಿಸಿ ಪೋಲಿಸರಿಂದ ಕಿರುಕುಳಕ್ಕೆ ಒಳಗಾಗಿ ಬಂಧನಕ್ಕೆ ಒಳಗಾದ ಹಿರಿಯ ಆರ್ ಎಸ್ಎಸ್ ಕಾರ್ಯಕರ್ತ ರಾದ ಡಾ.ಬಿ.ವಿ.ಕೃಷ್ಣಪ್ಪ. ರೂಪಸಿ ರಮೇಶ್, ಕೆಂ.ನಾಗರಾಜ್ ರನ್ನು ಸಂಸದ ಡಾ.ಕೆ.ಸುಧಾಕರ್ ಮತ್ತು ಗಣ್ಯರು ಸನ್ಮಾನಿಸಿದರು.
ಈ ವೇಳೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು,ನಿಕಟಪೂರ್ವ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮುಖಂಡರಾದ ಪಿ.ಎನ್.ಕೇಶವರೆಡ್ಡಿ, ಕೆ.ವಿ.ನಾಗರಾಜ್, ವೇಣುಗೋಪಾಲ್, ಡಾ.ಶಶಿಧರ್, ಹೆಚ್.ಎಸ್.ಮುರಳೀಧರ್, ಕೆ.ಬಿ.ಮುರಳಿ, ಮಧುಚಂದ್ರ, ಕೃಷ್ಣಮೂರ್ತಿ, ನಿರ್ಮಲ, ಆರ್.ಹೆಚ್.ಎನ್. ಅಶೋಕ್ ಕುಮಾರ್, ರಾಮಣ್ಣ, ಪ್ರೇಮಲೀಲಾ ವೆಂಕಟೇಶ್ ಮತ್ತಿತರರು ಇದ್ದರು.