ನವದೆಹಲಿ:
ಭಾರತ ಅಮೆರಿಕ , ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡ ಕ್ವಾಡ್ ಗುಂಪಿನ ವಿದೇಶಾಂಗ ಮಂತ್ರಿಗಳು ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿದ್ದಾರೆ. ಈ ವೇಳೆ ಭಯೋತ್ಪಾದಕರು 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಇದನ್ನು ಖಂಡಿಸಿರುವ ಕ್ವಾಡ್ ನಾಯಕರು ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇದು ಪಹಲ್ಗಾಮ್ ದಾಳಿಯ ಬಳಿಕ ನವದೆಹಲಿಯ ರಾಜತಾಂತ್ರಿಕ ನಡೆಗೆ ಸಿಕ್ಕಿದ ಬಹುದೊಡ್ಡ ಗೆಲುವಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನೊಳಗೊಂಡಿರುವ ಕ್ವಾಡ್ ನಾಯಕರು ಖಂಡಿಸಿದ್ದು,ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ. ಈ ಖಂಡನೀಯ ಕೃತ್ಯಕ್ಕೆ ಕಾರಣರಾದವರನ್ನು ಶಿಕ್ಷಿಸಲು ಜಾಗತಿಕ ಸಹಕಾರವನ್ನು ಕೋರಿದ್ದಾರೆ.
ವಾಷಿಂಗ್ಟನ್ನಲ್ಲಿ ನಡೆದ ಸಭೆಯ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಿದ ಕ್ವಾಡ್ ನ ವಿದೇಶಾಂಗ ಮಂತ್ರಿಗಳು ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ದುಷ್ಕೃತ್ಯದ ಅಪರಾಧಿಗಳು, ಸಂಘಟಕರು ಮತ್ತು ಹಣಕಾಸು ಒದಗಿಸುವವರನ್ನು ಯಾವುದೇ ವಿಳಂಬ ಮಾಡದೇ ನ್ಯಾಯದ ಕಟಕಟೆಗೆ ತರಬೇಕು. ಇದಕ್ಕಾಗಿ ಎಲ್ಲ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಅಂತಾರಾಷ್ಟ್ರೀಯ ಕಾನೂನು ಮತ್ತು ಸಂಬಂಧಿತ UNSCR ಗಳ ಅಡಿಯಲ್ಲಿ ಸಹಕರಿಸಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
ಸಂತ್ರಸ್ತ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸಿದ ಕ್ವಾಡ್ ನಾಯಕರು ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳು ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ಪೂರೈಸಬೇಕು ಮತ್ತು ಸಂಬಂಧಿತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳು ದಾಳಿಯ ತನಿಖೆ ನಡೆಸುವ ಅಧಿಕಾರಿಗಳೊಂದಿಗೆ ಸಕ್ರಿಯವಾಗಿ ಸಹಕರಿಸಬೇಕು ಎಂದು ಒತ್ತಾಯಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಜಪಾನ್ ವಿದೇಶಾಂಗ ಸಚಿವ ಟಕೇಶಿ ಇವಾಯಾ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರು ಮಂಗಳವಾರ ಅಮೆರಿಕದ ವಿದೇಶಾಂಗ ಇಲಾಖೆಯಲ್ಲಿ ನಡೆದ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅವರು ಭಯೋತ್ಪಾದನಾ ನಿಗ್ರಹಕ್ಕೆ ಸಹಕರಿಸಲು ಎಲ್ಲ ರಾಷ್ಟ್ರಗಳು ಒತ್ತು ನೀಡುವಂತೆ ಹೇಳಿದ್ದು, ಈ ಕುರಿತು ಸುದೀರ್ಘ ಚರ್ಚೆಯನ್ನು ನಡೆಸಿದರು. ರೂಬಿಯೊ ಅವರ ಆಹ್ವಾನದ ಮೇರೆಗೆ ಜೂನ್ 30 ರಿಂದ ಜುಲೈ 2ರ ನಡುವೆ ಅಮೆರಿಕಕ್ಕೆ ಭೇಟಿ ನೀಡಿದ ಭಾರತೀಯ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಕ್ವಾಡ್ ಅಧಿವೇಶನದ ಹೊರತಾಗಿ ಅವರೊಂದಿಗೆ ಪ್ರತ್ಯೇಕ ಸಭೆಯಲ್ಲಿ ಪಾಲ್ಗೊಂಡರು.
ಬಳಿಕ ಮಾತನಾಡಿದ ಜೈ ಶಂಕರ್, ಭಯೋತ್ಪಾದನೆಯ ವಿರುದ್ಧ ತನ್ನ ಜನರನ್ನು ರಕ್ಷಿಸುವ ಎಲ್ಲ ಹಕ್ಕು ಭಾರತಕ್ಕೆ ಇದೆ. ನಾವು ಅದನ್ನು ಮಾಡುತ್ತೇವೆ. ನಮ್ಮ ಕ್ವಾಡ್ ಪಾಲುದಾರರು ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದರು.