ಗಂಟಾಘೋಷ
ಬ್ರಿಟಿಷರ ಆಳ್ವಿಕೆ ಕೊನೆಗೊಂಡ ನಂತರ, ಭಾರತೀಯ ನಾಯಕರ ಮುಂದೆ ಹೊಸ ಸವಾಲು ಎದುರಾ ಗಿತ್ತು. ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ತತ್ವಗಳ ಆಧಾರದ ಮೇಲೆ ಪ್ರಜಾಪ್ರಭುತ್ವ ಸ್ಥಾಪಿಸುವುದರ ಜೊತೆಗೆ, ಭಾರತ ಸ್ವತಂತ್ರ ರಾಷ್ಟ್ರವಾಗಿ ನಿಲ್ಲಬೇಕೆಂದು, ಇನ್ನೆಂದೂ ಪರಕೀಯ ದಬ್ಬಾಳಿಕೆಗೆ ಬಲಿಯಾಗಬಾರದೆಂದು ಬಯಸಿದ್ದರು.
ಆಗಿನ ಕಾಲದ ವಿದ್ವನ್ಮಣಿಗಳು ಸೇರಿ ಹಲವಾರು ಸಭೆಗಳನ್ನು, ನಿರಂತರ ಚರ್ಚೆಗಳನ್ನು ಕೈಗೊಂಡ ಬಳಿಕ, ಜನವರಿ 1948ರಲ್ಲಿ ಮೊದಲ ಸಂವಿಧಾನದ ಕರಡು ಬಿಡುಗಡೆ ಮಾಡಲಾಯಿತು. 1948ರಲ್ಲಿ ಪ್ರಕಟವಾದ ಸಂವಿಧಾನದ ಕರಡಿಗೆ ತಿದ್ದುಪಡಿಯನ್ನು ಸೂಚಿಸಲು ದೇಶದ ನಾಗರಿಕರಿಗೆ ಎಂಟು ತಿಂಗಳ ಕಾಲಾವಕಾಶ ನೀಡಲಾಯಿತು. ಸತತ 2 ವರ್ಷ, 11 ತಿಂಗಳು ಮತ್ತು 18 ದಿನಗಳ ಅಧಿವೇಶ ನದ ನಂತರ ಭಾರತವು ತನ್ನ ಸಂವಿಧಾನವನ್ನು ಸ್ವೀಕರಿಸಿತು.
ಇಪ್ಪತ್ತೆರಡು ಭಾಗಗಳು ಮತ್ತು ಎಂಟು ಶೆಡ್ಯುಲ್ಗಳಲ್ಲಿ 395 ಆರ್ಟಿಕಲ್ಸ್ ಒಳಗೊಂಡ ಸಂವಿಧಾನ ಇದಾಗಿತ್ತು. ತನ್ನದೇ ಆದ ಪ್ರತ್ಯೇಕಮಾರ್ಗ, ಹೊಸ ಮಾದರಿ ಮತ್ತು ವಿಧಾನಗಳನ್ನು ಅನುಸರಿಸುವ ಮೂಲಕ ಆಧುನಿಕ ಜಗತ್ತಿನಲ್ಲಿ ವಿಶಿಷ್ಟ ಸ್ಥಾನಮಾನ ಹೊಂದಿದೆ. ಅತೀ ದೊಡ್ಡ ಲಿಖಿತ ಸಂವಿಧಾನ ವೆಂದೇ ಕರೆಯಲ್ಪಡುವ ಭಾರತೀಯ ಸಂವಿಧಾನವು ವಿಸ್ತಾರವಾದ ಪೀಠಿಕೆಯನ್ನೂ ಸಹ ಹೊಂದಿದೆ.
ಇದನ್ನೂ ಓದಿ: Gururaj Gantihole Column: ಮಧುಕರಣ್ಣನ ಮಾತಿನಲ್ಲಿ ತುರ್ತುಪರಿಸ್ಥಿತಿಯ ಕರಾಳದಿನ !
1947ರಿಂದ 1950ರ ವರೆಗೆ ಸಂವಿಧಾನವನ್ನು ರಚಿಸುವಾಗ, ಹೊಸ ಭಾರತೀಯ ರಾಜ್ಯಗಳ ಒಕ್ಕೂಟ ವು ಬ್ರಿಟಿಷ್ ಸಂಸತ್ತು ಜಾರಿಗೆ ತಂದಂತಹ ಅಸ್ತಿತ್ವದಲ್ಲಿರುವ ಶಾಸನದಿಂದ ನಿಯಂತ್ರಿಸಲ್ಪಡುತ್ತಿತ್ತು. ಸಂವಿಧಾನ ಸಭೆಯು ಸಂವಿಧಾನವನ್ನು ರಚಿಸಿತು, ಇದು ಮೂಲತಃ 389 ಸದಸ್ಯರನ್ನು ಒಳ ಗೊಂಡಿದ್ದ ಚುನಾಯಿತ ಶಾಸಕಾಂಗ ಸಂಸ್ಥೆಯಾಗಿತ್ತು.
ಭಾರತದ ವಿಭಜನೆಯ ನಂತರ ಅದನ್ನು 299ಕ್ಕೆ ಇಳಿಸಲಾಯಿತು. ರಾಜೇಂದ್ರ ಪ್ರಸಾದ್ ಅವರು ಸಭೆಯ ಅಧ್ಯಕ್ಷರಾಗಿ ಆಯ್ಕೆಯಾದರು, ಹರೇಂದ್ರಕುಮಾರ್ ಮುಖರ್ಜಿ ಸಭೆಯ ಉಪಾಧ್ಯಕ್ಷ ರಾಗಿದ್ದರು. ವಿಧಾನಸಭಾ ಸದಸ್ಯರಲ್ಲಿ ಒಬ್ಬರಾದ ಡಾ.ಅಂಬೇಡ್ಕರ್ ಕರಡು ಸಮಿತಿಯ ಅಧ್ಯಕ್ಷತೆ ವಹಿಸಿದ್ದರು. ವಿಧಾನಸಭೆಯ ಸದಸ್ಯರಲ್ಲದ ನ್ಯಾಯಶಾಸ್ತ್ರಜ್ಞ ಬೆನಗಲ್ ನರಸಿಂಗ್ ರಾವ್ ಅವರನ್ನು ಸಾಂವಿಧಾನಿಕ ಸಲಹೆಗಾರರನ್ನಾಗಿ ನೇಮಿಸಲಾಯಿತು. ಅವರು ದಾಖಲೆಯ ರೀತಿಯಲ್ಲಿ ಮೂಲ ಕರಡನ್ನು ಬರೆದರು.
ಇಂತಹ ಮಹಾಮಹಿಮರೆಲ್ಲ ಸೇರಿ, ಪ್ರತೀ ಪದವನ್ನು ಅಳೆದು ತೂಗಿ ನಮ್ಮ ಸಂವಿಧಾನಕ್ಕೆ ಒಂದು ರೂಪುರೇಷೆ ನೀಡಿದ್ದರು. ವರ್ಷಗಟ್ಟಲೇ ನೂರಾರು ಘನವಿದ್ವತ್ತಿನ ಚರ್ಚೆಗಳಾಗಿದ್ದವು. ಪೀಠಿಕೆ ರಚನೆಯ ಸಂದರ್ಭದಲ್ಲಿ ಗಾಂಧಿ, ದೇವರು ಇತ್ಯಾದಿ ವಿಚಾರಗಳು ಚರ್ಚೆಯ ನಡುವೆ ಬಂದು ಹೋದರೂ, ಅಂತಿಮವಾಗಿ ಜನರೇ ತಮಗಾಗಿ ಬರೆದು, ತಮಗೆ ಅರ್ಪಿಸಿಕೊಂಡಂತಹ ವಿಶಿಷ್ಟ ರೀತಿಯಲ್ಲಿ ಸಂವಿಧಾನವನ್ನು ದೇಶಕ್ಕೆ ಕೊಟ್ಟರು. ಕೇವಲ ಅಧಿಕಾರದಾಹಕ್ಕೆ, ಕುಟುಂಬ ರಾಜಕಾರಣ ಮುಂದುವರೆಸುವ ಹಪಾಹಪಿತನಕ್ಕೆ ಬಿದ್ದ ಇಂದಿರಾಗಾಂಧಿ, ಇಂತಹ ಒಂದು ಘನವೆತ್ತ ಸಂವಿಧಾನವನ್ನು ಕಗ್ಗೊಲೆ ಮಾಡಿಬಿಟ್ಟರು!
‘ನ್ಯಾಯಾಲಯಗಳು ನನ್ನನ್ನು ಕಟ್ಟಿ ಹಾಕಲು ನೋಡುತ್ತಿವೆ, ಸುತ್ತಲಿನ ಜನರು ತನ್ನ ವಿರುದ್ಧ ದಂಗೆಯೇಳುತ್ತಿದ್ದಾರೆ, ನನ್ನ ಅಧಿಕಾರ ಕಿತ್ತುಕೊಳ್ಳಲು ಎಲ್ಲರೂ ಸಂಚುರೂಪಿಸುತ್ತಿದ್ದಾರೆ ಎಂಬ ವಿಚಿತ್ರ ಭ್ರಮೆಗೆ ಬಿದ್ದ ಇಂದಿರಾಗಾಂಧಿ, ತನ್ನ ವೈಯಕ್ತಿಕ ಸಮಸ್ಯೆಯನ್ನು ದೇಶದ ಸಮಸ್ಯೆ ಎಂಬಂತೆ ಪರಿಗಣಿಸಿ, ದೇಶದ ಆಂತರಿಕ, ಬಾಹ್ಯ ಸುರಕ್ಷತೆಗೆ ದಕ್ಕೆ ಮತ್ತು ಬಾಹ್ಯ ಆಕ್ರಮಣದ ಸಂದರ್ಭದಲ್ಲಿ ಬಳಸಬಹುದಾದ ಕಲಂ 352ರ ಮೂಲಕ, ದೇಶದಲ್ಲಿ 1975, ಜೂನ್ 25ರಂದು ತುರ್ತುಪರಿಸ್ಥಿತಿ ಹೇರಿದರು.
ನಂತರ ದೇಶದಲ್ಲಿನ ಬಹುತೇಕ ರಾಜಕೀಯ ನಾಯಕರನ್ನು ಬಂಧಿಸಲಾಯಿತು. ವಿರೋಧಿಸುವ ಜನರನ್ನು ಜೈಲಿಗೆ ಹಾಕಲಾಯಿತು. ಸಂವಿಧಾನಾತ್ಮಕ ಎಲ್ಲ ಹಕ್ಕುಗಳನ್ನು ಅಮಾನತುಗೊಳಿಸ ಲಾಯಿತು. ಮಾಧ್ಯಮ ಸ್ವಾತಂತ್ರ್ಯವನ್ನು ಧಮನಿಸಲಾಯಿತು. ಇಡೀ ಸಂಸತ್ತು ನಿಷ್ಕ್ರಿಯ ಗೊಂಡಿತು.
ಸತತ 21 ತಿಂಗಳ ಕಾಲ ದೇಶದ ಜನರು ತುರ್ತುಪರಿಸ್ಥಿತಿ ಕರಾಳತೆಗೆ ನಲುಗಿ ಹೋದರು. ನಾಗರಿಕ ಹಕ್ಕುಗಳನ್ನು ಅಮಾನತುಗೊಳಿಸಿದ ಬಳಿಕ ಜನಜೀವನವೇ ಕಷ್ಟವಾಯಿತು. ಜಯಪ್ರಕಾಶ ನಾರಾ ಯಣ, ವಾಜಪೇಯಿ, ಅಡ್ವಾಣಿಯಂತಹ ಎಲ್ಲ ರಾಜಕೀಯ, ವಿರೋಧ ಪಕ್ಷಗಳ ನಾಯಕರುಗಳನ್ನು ಜೈಲಿಗೆ ಕಳುಹಿಸಲಾಯಿತು.
1971ರ ಚುನಾವಣೆಯಲ್ಲಿ 2/3 ಬಹುಮತ ಗೆಲುವು ಕಂಡಿದ್ದರಿಂದ ಸಂಸತ್ತಿನಲ್ಲಿ ಕಾಂಗ್ರೆಸ್, ಇಂದಿರಾಗಾಂಧಿಯನ್ನು ಪ್ರಶ್ನಿಸುವವರೇ ಇರಲಿಲ್ಲ. ಹೀಗಾಗಿ, 42ನೇ ಸಂವಿಧಾನ ತಿದ್ದುಪಡಿಗೆ ( 42nd Constitutional Amendment) ‘ಕೈ’ ಹಾಕಿದರು. ಸದನದಲ್ಲಿ ಅದನ್ನು ವಿರೋಧಿಸುವವರೇ ಇರಲಿಲ್ಲ. ರಾಜ್ಯಸಭೆಯಲ್ಲೂ ಬಹುಮತವಿದ್ದುದರಿಂದ, ಆ ಮಸೂದೆಯು ಚರ್ಚೆಯಾಗದೆ ಪಾಸೂ ಆಯಿತು. ಅತ್ಯಂತ ವಿವಾದಾತ್ಮಕ ತಿದ್ದುಪಡಿ ಮೂಲಕ ಸಂವಿಧಾನದ ಪ್ರಸ್ತಾವನೆಗೆ Socialist, Secular ಮತ್ತು Integrity ಎಂಬ ಹೊಸ ಪದಗಳನ್ನು ಸೇರಿಸಲಾಯಿತು. ಈ ತಿದ್ದುಪಡಿಯ ಮೂಲಕ, ಕೇಂದ್ರ ಸರಕಾರದ ಅಧಿಕಾರವನ್ನು ಬಲಿಷ್ಠಗೊಳಿಸಲಾಯಿತು.
ನ್ಯಾಯಾಲಯಗಳು ತಿದ್ದುಪಡಿಯನ್ನು, ಸಂವಿಧಾನ ಬದಲಾವಣೆಯನ್ನು ಪ್ರಶ್ನಿಸಬಾರದು ಎಂಬ ನಿಯಮ ಸೇರಿಸಲಾಯಿತು. ಅವುಗಳ ಜೊತೆಗೆ, ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಯಿತು. ಪ್ರಜಾಪ್ರಭುತ್ವದಲ್ಲಿ ಕರ್ತವ್ಯಗಳು ಬಹಳ ಮುಖ್ಯ ಎಂಬ ಹೆಸರಿನಲ್ಲಿ ಹಕ್ಕುಗಳನ್ನು ನಿರ್ಬಂಧಿಸಿ ಜನರ ಶೋಷಣೆ ನಡೆಸಲಾಯಿತು. ಮೂಲ ಸಂವಿಧಾನದಲ್ಲಿ ಇರುವ ಪ್ರಸ್ತಾವನೆ (Preamble) ”We, THE PEOPLE OF INDIA, having solemnly resolved to constitute India into a SOVEREIGN DEMOCRATIC REPUBLIC…..” ಎಂಬುದನ್ನು 42ನೇ ತಿದ್ದುಪಡಿ ಮೂಲಕ “ SOVEREIGN, SOCIALIST, SECULAR, DEMOCRATIC REPUBLIC” ಎಂದು ಬದಲಾಯಿಸಲಾಯಿತು ಮತ್ತು Unity of the Nation ಎಂಬುದನ್ನು Unity and Integrity of the Nation ಎಂದೂ ಬದಲಾಯಿಸಲಾಯಿತು.
ಸಂವಿಧಾನದ ಆತ್ಮವೆಂದೇ ಪರಿಗಣಿತವಾಗಿರುವ ಮೂಲ ಪ್ರಸ್ತಾವನೆಗೇ ‘ಕೈ’ಹಾಕುವ ಮೂಲಕ, ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕತ್ವವು ಸಂವಿಧಾನವನ್ನು ಮನಬಂದಂತೆ ಬದಲಾಯಿಸಿತು. ಈ ದೇಶ ಮತ್ತು ಸಂವಿಧಾನ ಒಂದು ಕುಟುಂಬದ ಆಸ್ತಿಯೇನೋ ಎಂಬಂತೆ ದಾರ್ಷ್ಟ್ಯ, ಅಹಂಕಾರ ದಿಂದ ನಡೆದುಕೊಂಡಿತು.
ಜನರ ಅಭಿಪ್ರಾಯ ಕೇಳಲಿಲ್ಲ, ಪ್ರಜಾಸತ್ತಾತ್ಮಕವಾಗಿ ಗೆದ್ದ ವಿರೋಧಪಕ್ಷಗಳ, ಜನಪ್ರತಿನಿಧಿಗಳ ಸಲಹೆ ಸೂಚನೆ ಪಡೆಯಲಿಲ್ಲ. ಅಕ್ಷರಶಃ ಸಂಸತ್ತನ್ನು ಕಾಂಗ್ರೆಸ್ ಪಕ್ಷದ ಕಚೇರಿಯಂತೆ ಬಳಸಿ ಕೊಂಡು ನೀತಿನಿಯಮಗಳನ್ನು ಗಾಳಿಗೆ ತೂರುವ ಮೂಲಕ, ಮೂಲ ಸಂವಿಧಾನದ ಆತ್ಮವನ್ನೇ ವಿರೂಪಗೊಳಿಸಿ ಡೆಮಾಕ್ರಸಿಯನ್ನು ಹತ್ಯೆಮಾಡಲಾಯಿತು.
ಡಾ.ಅಂಬೇಡ್ಕರ್ ಅವರು ‘ಸೆಕ್ಯೂಲರ್’ ಮತ್ತು ‘ಸೋಷಲಿಸ್ಟ್’ ಪದಗಳನ್ನು ಮೂಲ ಸಂವಿಧಾನದ ಪ್ರಾರಂಭ ಭಾಗದಲ್ಲಿ ಸೇರಿಸದಿರುವ ಕುರಿತು, ಅವರ ನಿಖರ ಅಭಿಪ್ರಾಯ ಸಂವಿಧಾನ ರಚನಾ ಕರಡು ಸಮಿತಿಯ ಚರ್ಚೆಗಳಲ್ಲಿ (Constituent Assembly Debates) ದಾಖಲಾಗಿದೆ.
ಪ್ರೊ.ಕೆ.ಟಿ.ಷಾ ರವರು 15ನೇ ನವೆಂಬರ್ 1948ರಂದು ಮಾಡಿದ ಪ್ರಸ್ತಾವನೆ; “India shall be a Secular Federal Socialist Union of states” ಹೀಗಿತ್ತು. ಇದಕ್ಕೆ ಅಂಬೇಡ್ಕರ್, ಅತ್ಯಂತ ಸ್ಪಷ್ಟವಾಗಿ ಈ ಪ್ರಸ್ತಾವ ಏಕೆ ಬೇಡವೆಂಬುದನ್ನು ಹೇಳುತ್ತ ಎರಡು ಅಂಶಗಳಲ್ಲಿ ತಿರಸ್ಕರಿಸಿದ್ದರು.
My objections, stated briefly are two. “”…, What should be the policy of the State, how the Society should be organised in its social and economic side are matters which must be decided by the people themselves according to time and circumstances. It cannot be laid down in the Constitution itself, because that is destroying democracy altogether..” ಅಂದರೆ, “ಒಂದು ರಾಜ್ಯ, ಯಾವ ತತ್ವದ ಮೇಲೆ ನಡೆಯಬೇಕು ಎಂಬುದನ್ನು ಪ್ರತಿ ಕಾಲದಲ್ಲಿಯೂ ಜನರು ಚುನಾವಣೆಯಲ್ಲಿ ತೀರ್ಮಾನಿಸಬೇಕು.
ಇಡೀ ದೇಶದ ಭವಿಷ್ಯವನ್ನು ಒಂದು ರಾಜಕೀಯ ತತ್ವಕ್ಕೆ ಬಂಧಿಸುವುದು ಉಚಿತವಲ್ಲ. ಸಂವಿ ಧಾನವು ಎಲ್ಲ ತತ್ವಗಳಿಗೆ ತೆರೆದಿರಬೇಕು ಮತ್ತು ಅದನ್ನು ಕಾಲಾನುಸಾರ ಜನರು ರೂಪಿಸಬೇಕು ಎನ್ನುತ್ತಾ ಮೇಲಿನಂತೆ ಜನರ ಆಯ್ಕೆಗೆ ಬಿಡಬೇಕೆಂಬುದನ್ನು ಅಂಬೇಡ್ಕರ್ ಸ್ಪಷ್ಟವಾಗಿ 1948ರ ಸಂದರ್ಭದಲ್ಲಿಯೇ ಹೇಳಿದ್ದರು.
ಇನ್ನೊಂದರಲ್ಲಿ, ‘ The second reason is that the amendment is purely superfluous … If these directive principles … are not socialistic in their direction and in their content, I fail to understand what more socialism can be.’ ” ಅಂದರೆ, “ಸುಸ್ಥಿರ ಆದರ್ಶಗಳ ( Directive Principles ) ಮೂಲಕ, ಸಮಾಜವಾದದ ಲಕ್ಷಣಗಳು ಸಂವಿಧಾನದಲ್ಲಿದ್ದು, ‘ಸೋಷಲಿಸ್ಟ್’ ಪದ ಬಳಕೆ, ಸೇರಿಕೆ ಅಷ್ಟು ಹಿತಕಾರಿಯಲ್ಲ ಮತ್ತು ಅಗತ್ಯವಿಲ್ಲ” ಎಂದಿದ್ದರು.
ಸೆಕ್ಯುಲರ್ ಪದಬಳಕೆ ಬಗ್ಗೆ, “ಹಲವು ವಿಧಿಗಳಲ್ಲಿ ಇದನ್ನು ಬಲಪಡಿಸಲಾಗಿದ್ದು, ಪ್ರತ್ಯೇಕ ಪದಗಳ ರೂಪದಲ್ಲಿ ಪ್ರಕಟಿಸುವ ಅವಶ್ಯಕತೆ ಇಲ್ಲ” ಎಂದೂ ಹೇಳಿದ್ದರು. ನಮ್ಮ ಹಿರಿಯರು ಸಂವಿಧಾನ ದಲ್ಲಿ ಯಾವುದನ್ನು ಸೇರಿಸಬೇಕು ಮತ್ತು ಬಿಡಬೇಕು ಎಂಬುದಕ್ಕೆ ನಿಖರ ನಿಲುವು ಹೊಂದಿದ್ದರು, ಪ್ರತಿ ಶಬ್ಧ ಬಳಕೆಗೂ ಆಳವಾದ ವಿವೇಚನೆ ಬಳಸಿದ್ದರು ಎಂಬುದು ಆ ಸಂದರ್ಭದಲ್ಲಿ ನಡೆದ ಚರ್ಚೆಯಿಂದ ಸ್ಪಷ್ಟವಾಗುತ್ತದೆ.
ಆಧುನಿಕ ಜಗತ್ತಿನ ಶ್ರೇಷ್ಠ ಮತ್ತು ಬೃಹತ್ ಲಿಖಿತ ಸಂವಿಧಾನಕ್ಕೆ ಶಾಶ್ವತ ಕಪ್ಪುಚುಕ್ಕೆ ಇಟ್ಟ ಕಾಂಗ್ರೆಸ್ ಪಕ್ಷಕ್ಕೆ ಯಾವ ನೈತಿಕತೆ ಇದೆಯೆಂದು ಅದೇ ಸಂವಿಧಾನದ ಅಡಿಯಲ್ಲಿ, ಈ ದೇಶದಲ್ಲಿ ರಾಜಕೀಯವಾಗಿ ಮುಂದುವರೆಯುತ್ತಿದೆ ಎಂಬುದನ್ನು ಅದೇ ಪಕ್ಷದ ನಾಯಕರುಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.
ಇತಿಹಾಸವು ಆಯಾ ಕಾಲದ ಬಲಾಢ್ಯರಿಂದ ಬರೆಯಲ್ಪಡುತ್ತದೆ ಎನ್ನುವುದು ಸತ್ಯವಾದರೂ, ಕಾಲಘಟ್ಟವು ಇಂತಹ ತಪ್ಪಾದ ಇತಿಹಾಸವನ್ನು ಅಳಿಸಿಹಾಕುವ ಮಹಾಶಕ್ತಿ ಹೊಂದಿದೆ. ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿದ್ದ, ಶ್ಯಾಮಪ್ರಸಾದ ಮುಖರ್ಜಿ ವಿರೋಧಿಸಿ ಆತ್ಮಾರ್ಪಣೆ ಮಾಡಿದ್ದ ಕಲಂ 370 ಇಂದು ಕಸದ ಬುಟ್ಟಿಗೆ ಸೇರಿರುವುದೇ ಇದಕ್ಕೆ ನೇರಸಾಕ್ಷಿ.
ದೇಶದ ಆತ್ಮಸಾಕ್ಷಿ ಯಾವತ್ತೂ ಅನ್ಯಾಯ ಸಹಿಸದು. ಹಾಗಾಗಿ ತಪ್ಪುಗಳು ಸರಿಪಡಿಸುವವರೆಗೂ ಪ್ರಶ್ನಿಸುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಆರೆಸ್ಸೆಸ್ ಸಹ ಸರಕಾರ್ಯವಾಹರಾದ ದತ್ತಾತ್ರೆಯ ಹೊಸಬಾಳೆ (ದತ್ತಾಜೀ)ಅವರು ಸಂವಿಧಾನದ ಮೂಲ ಪೀಠಿಕೆಯ ಆಶಯ ಮತ್ತು ತುರ್ತು ಪರಿಸ್ಥಿತಿಯಲ್ಲಿ ಸೇರ್ಪಡೆಯಾದ ಎರಡು ಶಬ್ಧಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿ ಎಂದಿದ್ದಾರೆ.
ಅವರ ವಿಚಾರದಲ್ಲಿ ಸ್ಪಷ್ಟತೆಯಿದೆ. ಅಂಬೇಡ್ಕರ್ ಮೂಲ ಸಂವಿಧಾನ ಪೀಠಿಕೆಯಲ್ಲಿಲ್ಲದ, ಸಂವಿಧಾನಬಾಹಿರವಾಗಿ ಸೇರಿಸಿರುವ ವಿಷಯದ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗುವುದರಲ್ಲಿ ತಪ್ಪೇನಿದೇ? ಯಾಕಾಗಿ ಜಾತ್ಯಾತೀತ ಮತ್ತು ಸಮಾಜವಾದಿ ಪದ ಸೇರ್ಪಡೆಯಾಗಿದೆ ಎಂಬುದನ್ನು ಅರಿಯಲಿ. ಈ ವಿಷಯದಲ್ಲಿ ರಾಜಕೀಯ ಹೊರತಾಗಿ ಸಕಾರಾತ್ಮಕ ಚರ್ಚೆ ನಡೆಯಬೇಕು. ಸಂವಿಧಾನ ರಚನೆ ಮತ್ತು ಪೀಠಿಕೆಯ ಮೂಲಕ ಅಂಬೇಡ್ಕರ್ ಅವರು ದೇಶದ ಮುಂದಿಟ್ಟ ಆಶಯ ಜೀವಂತವಾಗಿರಬೇಕು, ಅದು ಭಾರತೀಯ ಜೀವನಾಡಿಯೂ ಹೌದು.