ಬೆಂಗಳೂರು:
ವಾಟ್ಸಾಪ್ ಬಳಕೆದಾರರಿಗೆ ಒಂದು ಗುಡ್ ನ್ಯೂಸ್. ಇನ್ನು ಮುಂದೆ ವಾಟ್ಸಾಪ್ ನಲ್ಲಿ ದಾಖಲೆಗಳನ್ನು ನೇರವಾಗಿ ಸ್ಕ್ಯಾನ್ ಮಾಡಬಹುದು. ಇಂತಹ ಒಂದು ಅವಕಾಶ ಶೀಘ್ರದಲ್ಲೇ ಎಲ್ಲ ಬಳಕೆದಾರರಿಗೂ ಲಭ್ಯವಾಗುವ ಸಾಧ್ಯತೆ ಇದೆ. ಈಗಾಗಲೇ ಈ ಫೀಚರ್ ವಾಟ್ಸಾಪ್ ತನ್ನ ಆಯ್ದ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ನೀಡಿದೆ. ಇದರಿಂದ ಬೀಟಾ ಬಳಕೆದಾರರು ಅಪ್ಲಿಕೇಶನ್ನಿಂದ ನೇರವಾಗಿ ದಾಖಲೆಗಳನ್ನು ಸ್ಕ್ಯಾನ್ ಮಾಡಲು ಅನುಮತಿಸುವ ಹೊಸ ಫೀಚರ್ ಹೊಂದಿದ್ದಾರೆ. ಇದು ಕಳೆದ ಕೆಲವು ತಿಂಗಳುಗಳಿಂದ ಐಓಎಸ್ ಬಳಕೆದಾರರಿಗೂ ಲಭ್ಯವಾಗಿದೆ.
ಬಹು ನಿರೀಕ್ಷಿತ ಡಾಕ್ಯುಮೆಂಟ್ ಸ್ಕ್ಯಾನಿಂಗ್ ಫೀಚರ್ ಶೀಘ್ರದಲ್ಲೇ ಆಂಡ್ರಾಯ್ಡ್ ಪ್ಲಾಟ್ಫಾರ್ಮ್ನಲ್ಲಿಯೂ ಲಭ್ಯವಾಗಲಿದೆ. ಇದರಿಂದ ಮೊಬೈಲ್ ಬಳಕೆದಾರರು ದಾಖಲೆಗಳನ್ನು ಸ್ಕ್ಯಾನ್ ಮಾಡಲು ಪ್ರತ್ಯೇಕ ಅಪ್ಲಿಕೇಶನ್ ಬಳಸಬೇಕಾಗಿಲ್ಲ. ನೇರವಾಗಿ ವಾಟ್ಸಾಪ್ ಮೂಲಕ ಕೆಮರಾದಲ್ಲಿ ಸ್ಕ್ಯಾನ್ ಮಾಡಿ ಅದನ್ನು ಪಿಡಿಎಫ್ ಸ್ವರೂಪಕ್ಕೆ ಬದಲಾಯಿಸಿ ನೋಡಬಹುದಾಗಿದೆ. ಇದರ ಮತ್ತೊಂದು ಲಾಭವೆಂದರೆ ಇದನ್ನು ನೇರವಾಗಿ ವಾಟ್ಸಾಪ್ ನಲ್ಲಿ ಸಂಪರ್ಕದಲ್ಲಿರುವ ಇತರರಿಗೂ ಕಳುಹಿಸಬಹುದು. ಇದು ಇನ್ನೊಂದು ಅನಗತ್ಯ ಅಪ್ಲಿಕೇಶನ್ಗಳನ್ನು ಮೊಬೈಲ್ ನಲ್ಲಿ ಇಟ್ಟುಕೊಳ್ಳಬಹುದಾದ ಹೊರೆಯನ್ನು ತಗ್ಗಿಸುತ್ತದೆ. ಅಲ್ಲದೇ ಅತ್ಯಂತ ವೇಗವಾಗಿ ಮತ್ತು ಸುಲಭವಾಗಿ ದಾಖಲೆಗಳನ್ನು ಪಡೆಯಲು ಸಹಾಯ ಮಾಡುತ್ತದೆ.
ಈ ಹೊಸ ಫೀಚರ್ನೊಂದಿಗೆ ವಾಟ್ಸಾಪ್ ತನ್ನ ಬಳಕೆದಾರರಿಗೆ ಪಿಡಿಎಫ್ ಸ್ವರೂಪದಲ್ಲಿರುವ ದಾಖಲೆಗಳನ್ನು ಸರಾಗವಾಗಿ ಸ್ಕ್ಯಾನ್ ಮಾಡಲು, ಪರಿವರ್ತಿಸಲು ಮತ್ತು ಹಂಚಿಕೊಳ್ಳಲು ಅನುಮತಿಸುತ್ತದೆ. ಇದರಿಂದ ಸಾಕಷ್ಟು ವೇಗವಾಗಿ ಕೆಲವೊಂದು ಅಗತ್ಯ ಕೆಲಸಗಳನ್ನು ನಿರ್ವಹಿಸಬಹುದಾಗಿದೆ.
ವಾಟ್ಸಾಪ್ ನಲ್ಲಿ ಈ ಹೊಸ ಫೀಚರ್ ಅನ್ನು ಪಡೆಯಬೇಕಾದರೆ ಅಪ್ಡೇಟ್ ಮಾಡುವುದು ಮುಖ್ಯವಾಗಿರುತ್ತದೆ. ಆದರೆ ಸದ್ಯ ಇದು ಆಂಡ್ರಾಯ್ಡ್ ಆವೃತ್ತಿ 2.25.18.29 ರ ಬೀಟಾದಲ್ಲಿ ಪರಿಚಯಿಸಲಾಗಿತ್ತು. ಆದರೆ ಅದು ಅಲ್ಲಿ ನಿಷ್ಕ್ರಿಯಗೊಂಡಿತ್ತು. ಆದರೂ ಈ ಫೀಚರ್ ಅನ್ನು ಈಗ ಆಯ್ದ ಬೀಟಾ ಬಳಕೆದಾರರಿಗೆ ವ್ಯಾಪಕವಾಗಿ ಪರಿಚಯಿಸಲಾಗುತ್ತಿದೆ. ಅನೇಕ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ನಿಂದ ಇತ್ತೀಚಿನ ನವೀಕರಣವನ್ನು ಪಡೆದ ಬಳಿಕ ಹೊಸ ಫೀಚರ್ ಅನ್ನು ಪಡೆಯುತ್ತಿದ್ದಾರೆ. ಇದು ಇನ್ನೂ ಅಭಿವೃದ್ಧಿ ಹಂತದಲ್ಲಿರುವುದರಿಂದ ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದೆ. ಶೀಘ್ರದಲ್ಲೇ ಎಲ್ಲ ಬಳಕೆದಾರರಿಗೂ ಇದು ಸಿಗಲಿದೆ.
ವಾಟ್ಸಾಪ್ ನ ಲಗತ್ತು ಐಕಾನ್ ಮೇಲೆ ಕ್ಲಿಕ್ ಮಾಡಿದಾಗ ಇಲ್ಲಿ “ಸ್ಕ್ಯಾನ್ ಡಾಕ್ಯುಮೆಂಟ್” ಎನ್ನುವ ಹೊಸ ಆಯ್ಕೆಯನ್ನು ನೋಡಬಹುದು. ಇದರಲ್ಲಿ “ಡಾಕ್ಯುಮೆಂಟ್ಗಳನ್ನು ಬ್ರೌಸ್ ಮಾಡಿ” ಮತ್ತು “ಗ್ಯಾಲರಿಯಿಂದ ಆರಿಸಿ” ಎಂಬ ಆಯ್ಕೆ ಸಿಗುತ್ತದೆ. ಇಲ್ಲಿ ಕ್ಲಿಕ್ ಮಾಡಿದ ತಕ್ಷಣ ಫೋನ್ ಕೆಮರಾ ತೆರೆದುಕೊಳ್ಳುತ್ತದೆ. ಅಲ್ಲಿ ಡಾಕ್ಯುಮೆಂಟ್ನ ಚಿತ್ರ ತೆಗೆದು ಅದನ್ನು ತಕ್ಷಣ ಇತರರೊಂದಿಗೆ ಹಂಚಿಕೊಳ್ಳಬಹುದಾಗಿದೆ.
ಇದರಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಸ್ಕ್ಯಾನ್ ಮೋಡ್ ಇದೆ. ಇದರ ಮ್ಯಾನುವಲ್ ಮೋಡ್ನಲ್ಲಿ ಡಾಕ್ಯುಮೆಂಟ್ನ ಯಾವ ಭಾಗವನ್ನು ಸ್ಕ್ಯಾನ್ ಮಾಡಬೇಕೆಂದು ನೀವು ನಿರ್ಧರಿಸಬಹುದು. ಆಟೋಮ್ಯಾಟಿಕ್ ಮೋಡ್ನಲ್ಲಿ ಡಾಕ್ಯುಮೆಂಟ್ನ ಅಂಚುಗಳನ್ನು ವಾಟ್ಸಾಪ್ ತಾನೇ ಗುರುತಿಸಿ ಸ್ಕ್ಯಾನ್ ಮಾಡುತ್ತದೆ.ಇದರೊಂದಿಗೆ ವಾಟ್ಸಾಪ್ ಇನ್ನೊಂದು ಹೊಸ ಎಐ ಫೀಚರ್ ಅನ್ನು ಪರಿಚಯಿಸಿದೆ. ಇದರಲ್ಲಿ ಯಾವುದೇ ವೈಯಕ್ತಿಕ ಚಾಟ್ನ ಬುಲೆಟ್-ಪಾಯಿಂಟ್ ಸಾರಾಂಶವನ್ನು ರಚಿಸಬಹುದು. ಮೆಟಾ AI-ಬೆಂಬಲಿತ ಈ ಫೀಚರ್ ಸಂಪೂರ್ಣ ಚಾಟ್ ಅನ್ನು ತೆರೆಯದೆಯೇ ಸಂಭಾಷಣೆಯ ಮುಖ್ಯ ವಿಷಯ ಏನೆಂದು ಬಳಕೆದಾರರಿಗೆ ತಿಳಿಸುತ್ತದೆ. ಇದರಿಂದ ಸಾಕಷ್ಟು ಬಳಕೆದಾರರಿಗೆ ಅನುಕೂಲವಾಗಲಿದೆ.