ದೆಹಲಿ:
ಕರೋಲ್ ಬಾಗ್ ಪ್ರದೇಶದ ವಿಶಾಲ್ ಮೆಗಾ ಮಾರ್ಟ್ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 25 ವರ್ಷದ ಕುಮಾರ್ ಧೀರೇಂದ್ರ ಪ್ರತಾಪ್ ಲಿಫ್ಟ್ ಒಳಗೆ ಶವವಾಗಿ ಪತ್ತೆಯಾಗಿದ್ದಾರೆ. ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ಕಟ್ಟಡದಿಂದ ಮತ್ತೊಂದು ಸುಟ್ಟ ಪುರುಷ ಶವವನ್ನು ವಶಪಡಿಸಿಕೊಳ್ಳಲಾಯಿತು. ಎರಡನೇ ಶವವನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ಸದ್ಯ ಘಟನಾ ಸ್ಥಳದಲ್ಲಿ ಅಗ್ನಿಶಾಮಕ ದಳ ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಲಿಫ್ಟ್ನೊಳಗೆ ಸಿಲುಕಿಕೊಂಡಿದ್ದ ಧೀರೇಂದ್ರ ಅವರು ತಮ್ಮ ಅಣ್ಣನಿಗೆ ಕೊನೆಯ ಬಾರಿಗೆ ಸಂದೇಶ ಕಳುಹಿಸಿದ್ದು, ಅದರಲ್ಲಿ ತಾನು ಲಿಫ್ಟ್ನೊಳಗೆ ಸಿಲುಕಿಕೊಂಡಿದ್ದೇನೆ. ತನಗೆ ಉಸಿರಾಡಲು ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದರು. ದೆಹಲಿಯ ಕರೋಲ್ ಬಾಗ್ ಪ್ರದೇಶದ ಸುತ್ತ ಪದಮ್ ಸಿಂಗ್ ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡದ ಎರಡನೇ ಮಹಡಿಯಿಂದ ಸಂಜೆ 6.44 ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ .
ಇದು ವಿಶಾಲ್ ಮೆಗಾ ಮಾರ್ಟ್ ಔಟ್ಲೆಟ್ ಆಗಿದ್ದು, ಇಲ್ಲಿ ದಿನಸಿ ಮತ್ತು ಬಟ್ಟೆ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಬೆಂಕಿ ಮುಖ್ಯವಾಗಿ ಎರಡನೇ ಮಹಡಿಗೆ ಸೀಮಿತವಾಗಿತ್ತು” ಎಂದು ದೆಹಲಿ ಪೊಲೀಸ್ ಹೇಳಿಕೆ ತಿಳಿಸಿದೆ. ಬೆಂಕಿಯನ್ನು ನಂದಿಸಲು ಹದಿಮೂರು ಅಗ್ನಿಶಾಮಕ ದಳಗಳನ್ನು ನಿಯೋಜಿಸಲಾಗಿತ್ತು ಮತ್ತು ಸುಮಾರು 90 ಅಗ್ನಿಶಾಮಕ ದಳದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆವರಣದೊಳಗೆ ಸಾಕಷ್ಟು ಗಾಳಿ ಸಂಚಾರ ಇಲ್ಲದ ಕಾರಣ ಬೆಂಕಿ ನಂದಿಸುವ ಪ್ರಯತ್ನ ದೀರ್ಘವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಗೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲವಾದರೂ, ಪ್ರಾಥಮಿಕ ಸೂಚನೆಗಳು ಶಂಕಿತ ಶಾರ್ಟ್ ಸರ್ಕ್ಯೂಟ್ ಅನ್ನು ಸೂಚಿಸುತ್ತವೆ. ಸದ್ಯ ಪೊಲೀಸರು ಈ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.
ಜುಲೈ 4 ರಂದು ಗುಜರಾತ್ನ ಖೇಡಾದಲ್ಲಿರುವ (Kheda) ಅಕ್ಕಿ ಗಿರಣಿ ಗೋದಾಮಿನಲ್ಲಿ ಭಾರೀ ಬೆಂಕಿ ಅನಾಹುತ ನಡೆದಿದೆ. ಅಗ್ನಿಶಾಮಕ ದಳದವರು ಅವಶೇಷಗಳನ್ನು ತೆರವುಗೊಳಿಸಲು, ಬೆಂಕಿಯನ್ನು ನಂದಿಸಲು ಮತ್ತು ಹೆಚ್ಚಿನ ಹಾನಿಯನ್ನು ತಡೆಯಲು ಕೆಲಸ ಮಾಡಿದರು. ಬೆಂಕಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಅದೃಷ್ಟವಶಾತ್, ಯಾವುದೇ ಗಾಯಗಳು ಅಥವಾ ಸಾವುನೋವುಗಳು ವರದಿಯಾಗಿಲ್ಲ.