
ಪ್ರಾಥಮಿಕ ಹಂತದಲ್ಲಿಯೇ ಶೈಕ್ಷಣಿಕ ಸುಧಾರಣೆಗೆ ಒತ್ತು ನೀಡಿ; ಶಿಕ್ಷಕರು ಜವಾಬ್ದಾರಿಯಿಂದ ಕೆಲಸ ಮಾಡಿ: ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಧಾರವಾಡ.30: ಧಾರವಾಡ ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಜಿಲ್ಲಾಡಳಿತ ಮತ್ತು ಶಾಲಾ ಶಿಕ್ಷಣ ಇಲಾಖೆ ಮಿಷನ್ ವಿದ್ಯಾ ಕಾಶಿ ಯೋಜನೆ ಮೂಲಕ ವಿನೂತನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಶಿಕ್ಷಕರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ, ಪ್ರಾಥಮಿಕ ಶಾಲೆ ಹಂತದಲ್ಲಿಯೇ ಮಕ್ಕಳನ್ನು ಸುಧಾರಿಸಲು ಪ್ರಯತ್ನಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಅವರು ಹೇಳಿದರು.

ಅವರು ಇಂದು (ಮೇ.30) ಬೆಳಿಗ್ಗೆ ನಗರದ ಸರಕಾರಿ ಮಹಿಳಾ ತರಬೇತಿ ಕೇಂದ್ರ (ಟಿಸಿಡಬ್ಲು) ಆವರಣದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ ಮತ್ತು ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಹಿಂದಿನ ಶಿಕ್ಷಣ ಪದ್ಧತಿಗೂ ಪ್ರಸ್ತುತ ಶಿಕ್ಷಣ ಪದ್ಧತಿಗೂ ಹೆಚ್ಚು ವ್ಯತ್ಯಾಸವಿದೆ. ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೋಡುವುದು ಅವಶ್ಯವಿದೆ. ಸರಕಾರಿ ಶಾಲೆಗಳಲ್ಲಿ ನಾವು ಇನ್ನೂ ಉತ್ತಮವಾದ ಫಲಿತಾಂಶವನ್ನು ಕೊಟ್ಟರೆ ಶಾಲೆಯಲ್ಲಿನ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದೆ. ಶಿಕ್ಷಕರು ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿದರೆ ಅವರ ಮುಂದಿನ ಭವಿಷ್ಯ ಉತ್ತಮವಾಗುತ್ತದೆ.

ಮಕ್ಕಳ ಜೀವನದ ಮೇಲೆ ಶಿಕ್ಷಕರ ವಚ್ರ್ಚಸ್ಸು ಅತಿ ಹೆಚ್ಚು ಪ್ರಭಾವ ಬೀರುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು. ತಮ್ಮ ಶಾಲೆಯ ವ್ಯಾಪ್ತಿಯಲ್ಲಿನ ಪ್ರತಿ ಮಗು ಶಾಲೆಗೆ ಬರುವಂತೆ ಶಿಕ್ಷಕರು ಕಾಳಜಿ ವಹಿಸಬೇಕು. ಯಾವುದೇ ಮಗು ಶಾಲೆಯಿಂದ ಹೊರಗುಳಿದಂತೆ ಎಚ್ಚರಿಕೆ ವಹಿಸಬೇಕು. ಪಾಲಕರೊಂದಿಗೆ ಶಿಕ್ಷಕರು ಉತ್ತಮ ಸಂಬಂಧ ಹೊಂದಿರಬೇಕು. ಶಾಲೆಯ ಮಕ್ಕಳಲ್ಲಿ ಕ್ರಿಯಾತ್ಮಕತೆ, ಏಕಾಗ್ರತೆ ಬೆಳೆಸಬೇಕು ಎಂದು ಅವರು ಹೇಳಿದರು.ಮುಖ್ಯ ಅತಿಥಿಗಳಾಗಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಅವರು ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಸಬೇಕಾದರೆ ಅವರಿಗೆ ಭಾμÁ ಬಳಕೆ, ವ್ಯಾಕರಣವನ್ನು ಅರ್ಥವಾಗುವಂತೆ ಕಲಿಸಬೇಕು. ಮಕ್ಕಳ ಆರಂಭಿಕ ಶಿಕ್ಷಣ ಮುಖ್ಯವಾಗಿದೆ ಎಂದು ಹೇಳಿದರು.ಇಂದು ಗುಣಮಟ್ಟದ ಶಿಕ್ಷಣ ಅವಶ್ಯವಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗದ ಹಾಗೆ ನೋಡಿಕೊಳ್ಳುವ ಜವಾಬ್ದಾರಿಯೂ ಶಿಕ್ಷಕರಿಗೆ ಇರುತ್ತದೆ. ಶಿಕ್ಷಕರಾದವರು ಮಕ್ಕಳಲ್ಲಿ ತಾರತಮ್ಯ ಕಾಣದೆ, ಎಲ್ಲರೂ ಒಂದೇ ಎಂದು ತಿಳಿದು ಪ್ರೀತಿ ವಿಶ್ವಾಸದಿಂದ ಬೆಳೆಸಬೇಕು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ದಿಂದ ಮಕ್ಕಳು ಶಾಲೆಯಿಂದ ಹೊರಗೆ ಉಳಿಯಬಾರದು ಎಂಬ ಆದೇಶವಿದೆ. ಮಕ್ಕಳ ಕನಸನ್ನು ನನಸು ಮಾಡುವ ಜವಾಬ್ದಾರಿ ಶಿಕ್ಷಕರದಾಗಿರುತ್ತದೆ. ಮಕ್ಕಳು ದೇಶಕ್ಕೆ ಒಳ್ಳೆಯ ಪ್ರಜೆಯಾಗಿ, ಸಮಾಜಕ್ಕೆ ಕೊಡುಗೆ ಕೊಡುವಂತಹ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಎಂದು ಅವರು ಹೇಳಿದರು.ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿರುವ ಶಿಕ್ಷಕರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಸರಕಾರದಿಂದ ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ ಬಂದಿದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಆಗದಂತೆ ಕ್ರಮಕೈಗೊಳ್ಳಲಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಹೇಳಿದರು.ಪ್ರಾಥಮಿಕ ಶಾಲೆಗೆ ಒಟ್ಟು 1,02,988 ಸಮವಸ್ತ್ರ ಬೇಡಿಕೆ ಇದೆ. ಪ್ರೌಢಶಾಲೆಗೆ ಒಟ್ಟು 28164 ಸಮವಸ್ತ್ರ ಬೇಡಿಕೆ ಇದೆ. ಒಟ್ಟಾರೆಯಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ 1,31,152 ಸಮವಸ್ತ್ರ ಬೇಡಿಕೆ ಇರುತ್ತದೆ. ಜಿಲ್ಲೆಯ ಪ್ರಾಥಮಿಕ ಶಾಲೆಗೆ ಒಟ್ಟು 1,02,865 ಸಮವಸ್ತ್ರ ಪೂರೈಕೆಯಾಗಿದೆ. ಪ್ರೌಢಶಾಲೆಗೆ 28,008 ಸಮವಸ್ತ್ರ ಪೂರೈಕೆಯಾಗಿದೆ. ಒಟ್ಟಾರೆಯಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಒಟ್ಟು 1,30,873 ಸಮವಸ್ತ್ರಗಳ ಪೂರೈಕೆ ಆಗಿದೆ ಎಂದು ಅವರು ಹೇಳಿದರು. ಜಿಲ್ಲೆಗೆ ಒಟ್ಟು 27,22,400 ಪಠ್ಯ ಪುಸ್ತಕಗಳ ಬೇಡಿಕೆ ಇತ್ತು. ಈಗಾಗಲೇ ಒಟ್ಟು 21,69,370 ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಜಿಲ್ಲೆಗೆ ಈಗಾಗಲೇ ಶೇ. 79.69 ರಷ್ಟು ಪಠ್ಯ ಪುಸ್ತಕ ಪೂರೈಕೆ ಆಗಿದೆ ಎಂದು ಡಿಡಿಪಿಐ ಅವರು ತಿಳಿಸಿದರು.ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ ಎಸ್.ಎಂ.ಹುಡೇದಮನಿ ಅವರು ಸ್ವಾಗತಿಸಿದರು. ಧಾರವಾಡ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಹಾಗೂ ಸಹ ಸಮನ್ವಯಾಧಿಕಾರಿ ರೇಣುಕಾ ಅಮಲಜೇರಿ ವೇದಿಕೆಯಲ್ಲಿ ಇದ್ದರು.ಎಸ್.ಡಿ.ಎಂ.ಸಿ ಅಧ್ಯಕ್ಷೆ ಸೀಮಾ ಹುಗ್ಗಿ, ಧಾರವಾಡ ಟಿಸಿಡಬ್ಲು ಪ್ರಭಾರಿ ಪ್ರಾಚಾರ್ಯರೆ ದಿಪ್ತಿ ಅಪಯ್ಯ, ಎಸ್.ಡಿ.ಎಮ್.ಸಿ ಅಧ್ಯಕ್ಷ ಖ್ವಾಜಾಮಿಯಾ ಧಫೇದಾರ ಹಾಗೂ ಮುಖ್ಯೋಪಾಧ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿವಿಧ ಸರಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರಗಳನ್ನು ವಿತರಿಸಲಾಯಿತು.