[ad_1]
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂ. 4ರಂದು ನಡೆದ ಕಾಲ್ತುಳಿತಕ್ಕೆ ಸಿಲುಕಿ 11 ಮಂದಿ ಆರ್ಸಿಬಿ ಅಭಿಮಾನಿಗಳು ಮೃತಪಟ್ಟ ಬೆನ್ನಲ್ಲೇ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ (Bengaluru Police Commissioner) ಬಿ.ದಯಾನಂದ್ ಸೇರಿ ಹಲವು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇದರ ಬೆನ್ನಲ್ಲೇ ಸೀಮಂತ್ ಕುಮಾರ್ ಸಿಂಗ್ (Seemanth Kumar Singh) ಅವರನ್ನು ಬೆಂಗಳೂರು ನಗರದ ನೂತನ ಕಮಿಷನರ್ ಆಗಿ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ.
ಬೆಂಗಳೂರು ಮಹಾನಗರ ಕಾರ್ಯಪಡೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ 1996ರ ಕರ್ನಾಟಕ ಕೆಡರ್ನ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಆಯುಕ್ತರಾಗಿ ನೇಮಿಸಲಾಗಿದೆ ಎಂದು ಆದೇಶದಲ್ಲಿ ಸರ್ಕಾರ ತಿಳಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಅಧಿಕಾರಿಗಳನ್ನು ಅಮಾನತುಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ ತಿಳಿಸಿದ ಬೆನ್ನಲ್ಲೇ ನೂತನ ಕಮಿಷನರ್ ನೇಮಕ ಆದೇಶ ಹೊರ ಬಿದ್ದಿದೆ.
ಈ ಸುದ್ದಿಯನ್ನೂ ಓದಿ: ಕಾಲ್ತುಳಿತ ಪ್ರಕರಣ: ಬೆಂಗಳೂರು ಪೊಲೀಸ್ ಕಮಿಷನರ್, ಎಡಿಜಿಪಿ, ಡಿಸಿಪಿ, ಎಸಿಪಿ ಸಸ್ಪೆಂಡ್! ಸರ್ಕಾರದ ಅಭೂತಪೂರ್ವ ಆದೇಶ
ಯಾರು ಈ ಸೀಮಂತ್ ಕುಮಾರ್ ಸಿಂಗ್?
ಜಾರ್ಖಂಡ್ ಮೂಲದ ಸೀಮಂತ್ ಕುಮಾರ್ ಸಿಂಗ್ ಮಂಗಳೂರು ನಗರಕ್ಕೆ ಕಮಿಷನರೇಟ್ ಬಂದ ಬಳಿಕ ಮೊದಲ ಪೊಲೀಸ್ ಕಮಿಷನರ್ ಆಗಿದ್ದರು. 2000ದಿಂದ 2004ರವರೆಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಆ ಬಳಿಕ 2014ರಲ್ಲಿ ಪಶ್ಚಿಮ ವಲಯದ ಐಜಿಪಿಯಾಗಿದ್ದರು. ಬೆಂಗಳೂರು ಕೇಂದ್ರ ವಿಭಾಗದ ಐಜಿಪಿಯಾಗಿದ್ದ ಸೀಮಂತ್ ಕುಮಾರ್ ಸಿಂಗ್ ಡಿಐಜಿ ಮತ್ತು ನಕ್ಸಲ್ ನಿಗ್ರಹ ಪಡೆ (ANF)ನ ಕಮಾಂಡರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಉನ್ನತ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದ ಸರ್ಕಾರ
ʼʼಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ.ಶೇಖರ್, ಎಸಿಪಿ ಬಾಲಕೃಷ್ಣ, ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ಗಿರೀಶ್.ಎ.ಕೆ. ಅವರನ್ನು ಅಮಾನತು ಮಾಡಲಾಗಿದೆ. ಮೇಲ್ನೋಟಕ್ಕೆ ಈ ಅಧಿಕಾರಿಗಳ ಬೇಜವಾಬ್ದಾರಿತನ, ಅಲಕ್ಷ್ಯ ಕಂಡುಬಂದ ಕಾರಣ ಅಮಾನತುಗೊಳಿಸಲು ತೀರ್ಮಾನಿಸಲಾಗಿದೆʼʼ ಎಂದು ಸಿಎಂ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.
[ad_2]
Source link