[ad_1]
ವಾಣಿ ಹುಗ್ಗಿ
ತಾಯಿಯ ಸೌಭಾಗ್ಯ. ತಾಯಿ ಮನೆಯೆಂದರೂ ತವರುಮನೆಯ ಆಧಾರವೇ ಅಪ್ಪ. ನನ್ನಪ್ಪ ಹುರಿ ಮೀಸೆಯ ಕಟ್ಟಾಳು, ಕೆಂಡದ ಕಣ್ಣುಗಳಿದ್ದರೂ ಮಮತೆಯ ಸೆಲೆ. ಕಂಚಿನ ಕಂಠ, ಕೃಷ್ಣವರ್ಣದ ನಗುಮೊಗದ ಚೆಲುವ. ಅತೀ ಸಿಟ್ಟಿನಲ್ಲೂ ಶಾಂತ ಸ್ವಭಾವ! ಮಾತುಗಳು ಮನೆ ಕೆಡಿಸಬಾರದೆನ್ನುವ ಸಂಯಮಿ, ಆಡಂಬರವಿಲ್ಲದ ಸರಳ ಜೀವಿ. ಯಾರೊಂದಿ ಗೂ ಭೇದಭಾವವಿಲ್ಲದ, ಕಪಟವಿಲ್ಲದ ಒಡನಾಡಿ. ಮನಸ್ಸಿನಲ್ಲಿ ವಿರಾಜಮಾನನಾದ ಕಿರೀಟ ತೊಟ್ಟಿರದ ಅರಸ. ಕುಟುಂಬದ ಜವಾಬ್ದಾರಿ ಯನ್ನು ಎಳೆ ಹೆಗಲುಗಳ ಮೇಲೆ ಹೊತ್ತುಕೊಂಡು ಸಂಸಾರವನ್ನು ಸಾಗಿಸಿದ ಛಲಗಾರ. ಹದಿನೇಳು ವಯಸ್ಸಿಗೇ ಮದುವೆಯಾದವ.
ಐದು ಮಕ್ಕಳ ದೊಡ್ಡ ಕುಟುಂಬ, ಅಪ್ಪನ ಜೊತೆ ಸಲಿಗೆ ಕಡಿಮೆ; ಎಲ್ಲಿರಗೂ ಅಪ್ಪನೆಂದರೆ ಭಯ ಮಿಶ್ರಿತ ಪ್ರೀತಿ. ನಾವೆಲ್ಲ ಸಣ್ಣವರಿದ್ದಾಗ ನಮ್ಮ ತಂಟೆ, ಕಾರುಬಾರು, ಹಠಕ್ಕೆಲ್ಲ ಅಪ್ಪನ ಕೈಏಟೇ ಮದ್ದು! ಮಕ್ಕಳಿಗೆ ಅವರವರ ಸ್ವಂತ ವ್ಯಕ್ತಿತ್ವ ಕಟ್ಟಿಕೊಳ್ಳಲು, ತಮ್ಮದೆ ನಿರ್ಣಯ ತೆಗೆದುಕೊಳ್ಳಲು ಸ್ವಾತಂತ್ರ್ಯ ಕೊಟ್ಟ. ನಾವೆಲ್ಲ ದೊಡ್ಡವರಾದ ಹಾಗೆ ಅಪ್ಪನ ಸಿಟ್ಟು ಇಳಿಯಿತು.
ಇದನ್ನೂ ಓದಿ: Fathers Day Fashion 2025: ಅಪ್ಪಂದಿರ ದಿನಕ್ಕೂ ಬಂತು ಫ್ಯಾಷನ್ ಸ್ಟೇಟ್ಮೆಂಟ್ಸ್!
ಮೂರು ಹೆಣ್ಣುಮಕ್ಕಳ ಮದುವೆಯ ನಂತರ ಅಪ್ಪ ಏಕದಮ್ ಶಾಂತನಾದ. ಅಪ್ಪ, ಅವ್ವ ಇಬ್ಬರೂ ಶಾಲೆ ಕಲಿತಿಲ್ಲವಾದ್ದರಿಂದ ಮಕ್ಕಳನ್ನೆಲ್ಲ ಉನ್ನತ ಅಭ್ಯಾಸ ಮಾಡಿಸುವ ಆಸೆ. ಮಕ್ಕಳ ವಿದ್ಯಾ ಭ್ಯಾಸಕ್ಕೆ ಕೊರತೆಯಾಗದಂತೆ, ಭವಿಷ್ಯಕ್ಕೆ ಕುಂದು ಬಾರದಂತೆ ನೋಡಿಕೊಂಡ ಆರ್ಥಿಕ ಶಿಸ್ತುಗಾರ. ನಾನೆಂಬ ಅಹಂ ಇಲ್ಲದ ನಿಸ್ಪೃಹ.
ಯಾವುದೇ ವ್ಯಕ್ತಿತ್ವ ವಿಕಸನ ತರಬೇತಿಗೂ ಹೋಗದ ಘನ ವ್ಯಕ್ತಿತ್ವ. ಯಾವುದನ್ನೂ ಪಾಠ ಮಾಡದೆ ಬದುಕಿಯೆ ತೋರಿಸಿ ಉದಾಹರಣೆಯಾಗಿ ಉಳಿದುಬಿಟ್ಟ ಶಿಕ್ಷಕ. ದುಡಿತದಲ್ಲಿಯೇ ಜೀವನ ಸುಖವನ್ನು ಕಂಡ ಕಾಯಕ ಯೋಗಿ. ಕಾಯಕವೇ ಕೈಲಾಸವೆಂದ ಕರ್ಮಯೋಗಿ. ಅಜ್ಜನೊಂದಿಗೆ ಹೊಟೆಲಿನಲ್ಲಿ, ಜೋಳದ ವ್ಯಾಪಾರಿಯಾಗಿ ಕೈಗೂಡಿದ್ದನಂತೆ.
ದೊಡ್ಡ ಉದ್ಯಮಿ ಅಲ್ಲದಿದ್ದರೂ ಕಿರಾಣಿ ಅಂಗಡಿ ವ್ಯಾಪಾರಿಯಾಗಿ ಬೆಳೆದ. ಓಣಿಯ ಮಂದಿಗೆಲ್ಲ ಬೇಕಾದವನಾದ. ಕೈಲಾದ ಸಹಾಯವನ್ನು ಮಾಡಿದ. ಇಂದು ಅವನಿದ್ದಿದ್ದರೆ ಹೊಣೆಗಾರಿಕೆಯಿಂದ ಬಿಡುಗಡೆಯೇ ಇರುತಿರಲಿಲ್ಲ. ಅದಕ್ಕೆ ಆ ದೇವರು ಅರವತ್ತು ವರ್ಷದ ಬದುಕಿಗೇ ನಿವೃತ್ತಿಯನ್ನು ಬರೆದುಬಿಟ್ಟ.
ನಿನಗೆ ಸಮಯ ಕಮ್ಮಿ ಇತ್ತೆಂದೆ ರಜೆ ಇಲ್ಲದೆ ದುಡಿಯುತ್ತಿದ್ದೆಯೇನೋ? ಅಪ್ಪನಿಲ್ಲದ ಮನೆಯನ್ನು ಜೀರ್ಣೀಸಿಕೊಳ್ಳುವುದು ಕಷ್ಟ. ಆದರೆ ವಿಧಿಯು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯ! ಅಪ್ಪ ನೆಂದರೆ ಆಕಾಶವಲ್ಲ, ಅವನು ಆಲದ ಮರದಂತಹ ಆಸರೆ! ಧೈರ್ಯ! ಕೇಳದೆ ವರವನ್ನಿತ್ತ ದೇವರು. ನೀನಿದ್ದಾಗ ನಿನಗೆ ಅಪ್ಪಂದಿರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಲೇ ಇಲ್ಲ, ಧನ್ಯವಾದ ಹೇಳಲೇ ಇಲ್ಲ. ನೀ ಕೊಟ್ಟ ಎಲ್ಲದಕ್ಕೂ ಧನ್ಯವಾದ, ಹಾಗೆಯೇ ಅಪ್ಪಂದಿರ ದಿನಾಚರಣೆಯ ಶುಭಾಶಯಗಳು ಅಪ್ಪಾ. ನಿನ್ನಂಥ ಅಪ್ಪ ಇಲ್ಲ ಎಂದು ಹಾಡಿ ಕುಣಿಯುವ ಆಸೆ ಮನಸಿನಲ್ಲಿಯೇ ಉಳಿದ ಕಳವಳ. ಅಪ್ಪಾ ನಿನ್ನಾತ್ಮಕ್ಕೆ ಶಾಂತಿ ಸಿಗಲಿ.
[ad_2]
Source link