ಅಹಮದಾಬಾದ್: 148ನೇ ಜಗನ್ನಾಥ (Jagannath) ರಥಯಾತ್ರೆಯ (Rath Yatra) ಸಂದರ್ಭದಲ್ಲಿ ಶುಕ್ರವಾರ ಅಹಮದಾಬಾದ್ನ (Ahmedabad) ಖಾದಿಯಾ ಪ್ರದೇಶದಲ್ಲಿ ಆನೆಯೊಂದು (Elephant) ಅತಿಯಾದ ಶಬ್ದದಿಂದ ಕೆರಳಿ ಬ್ಯಾರಿಕೇಡ್ ಮುರಿದು ಕಿರಿದಾದ ರಸ್ತೆಗೆ ನುಗ್ಗಿದ್ದು, ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಖಾದಿಯಾ ಗೇಟ್ ಬಳಿ ಜೋರಾದ ಸಂಗೀತ ಮತ್ತು ಕೂಗಾಟದಿಂದ ಗಂಡು ಆನೆ ಕೆರಳಿತು. ಇದರಿಂದ ಆನೆ ನಿಗದಿತ ಮಾರ್ಗದಿಂದ ಓಡಿತು. ಎರಡು ಹೆಣ್ಣಾನೆಗಳ ಮಾವುತರು ಅದನ್ನು ಹಿಂಬಾಲಿಸಿ ನಿಯಂತ್ರಿಸಿದರು” ಎಂದು ಕಂಕರಿಯಾ ಮೃಗಾಲಯದ ಅಧೀಕ್ಷಕ ಆರ್ಕೆ ಸಾಹು ಹೇಳಿದ್ದಾರೆ. ಈ ಘಟನೆಯಿಂದ ಯಾತ್ರೆಗೆ ತಾತ್ಕಾಲಿಕ ಅಡಚಣೆಯಾದರೂ, ನಂತರ ಸುಗಮವಾಗಿ ಮುಂದುವರಿಯಿತು ಎಂದು ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ಕೋಮಲ್ ವ್ಯಾಸ್ ತಿಳಿಸಿದರು. ಗಾಯಗೊಂಡ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
400 ವರ್ಷಗಳ ಇತಿಹಾಸವಿರುವ ಜಗನ್ನಾಥ ದೇವಸ್ಥಾನದಿಂದ ಬೆಳಗ್ಗೆ ಆರಂಭವಾದ ಈ ಭವ್ಯ ಯಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. 16 ಕಿಮೀ ಕ್ರಮಿಸಿ ರಾತ್ರಿ 8 ಗಂಟೆಯೊಳಗೆ ವಾಪಸಾಗುವ ಯಾತ್ರೆಯಲ್ಲಿ 17 ಆನೆಗಳು, 100 ಟ್ರಕ್ಗಳು ಮತ್ತು 30 ಅಖಾಡಗಳು ಭಾಗವಹಿಸಿವೆ. 17 ಆನೆಗಳಲ್ಲಿ ಒಂದು ಮಾತ್ರ ಗಂಡು ಆನೆಯಾಗಿದ್ದು, ಯಾತ್ರೆಗೆ ಮೊದಲು ಆನೆಗಳ ಆರೋಗ್ಯವನ್ನು ಸಾಹು ಪರಿಶೀಲಿಸಿದ್ದರು.
ವೈರಲಾಗ್ತಿರುವ ವಿಡಿಯೊ ಇಲ್ಲಿದೆ
ಈ ಸುದ್ದಿಯನ್ನೂ ಓದಿ: Jagan Reddy: ಜಗನ್ ಮೋಹನ್ ರೆಡ್ಡಿ ವಾಹನದ ಅಡಿಗೆ ಬಿದ್ದು ವೈಎಸ್ಆರ್ಸಿಪಿಯ ಕಾರ್ಯಕರ್ತ ಸಾವು; ವಿಡಿಯೊ ವೈರಲ್
ವೈರಲ್ ವಿಡಿಯೊದಲ್ಲಿ, ಆನೆ ಬ್ಯಾರಿಕೇಡ್ ಮುರಿದು ಜನಸಂದಣಿಯ ಮಧ್ಯೆ ಕಿರಿದಾದ ರಸ್ತೆಗೆ ಓಡುವುದು ಕಂಡುಬಂದಿದೆ. “ಶಾಂತಿಗೊಳಿಸುವ ಔಷಧವಿಲ್ಲದೆ ಆನೆಯನ್ನು ತಕ್ಷಣ ನಿಯಂತ್ರಿಸಲಾಯಿತು. ಗಂಡು ಆನೆ ಮತ್ತು ಎರಡು ಹೆಣ್ಣಾನೆಗಳನ್ನು ಆ ಸ್ಥಳದಲ್ಲೇ ಕಟ್ಟಲಾಗಿದೆ. ಇವು ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ” ಎಂದು ಸಾಹು ಹೇಳಿದ್ದಾರೆ.
ಕಂಕರಿಯಾ ಮೃಗಾಲಯ, ಅರಣ್ಯ ಇಲಾಖೆ ಮತ್ತು ಪಶುವೈದ್ಯರ ತಂಡಗಳು ಆನೆಗಳ ಮೇಲೆ ನಿಗಾ ಇಟ್ಟಿವೆ. ಈ ಘಟನೆಯಿಂದ ಯಾತ್ರೆಗೆ ಸ್ವಲ್ಪ ಅಡಚಣೆಯಾದರೂ, ಭಕ್ತರ ಉತ್ಸಾಹಕ್ಕೆ ಯಾವುದೇ ಕೊರತೆಯಿಲ್ಲದೆ ಯಾತ್ರೆ ಮುಂದುವರಿಯಿತು.