ಮಂಗಳೂರು: ಪುತ್ತೂರಿನ ಬಿಜೆಪಿ ಮುಖಂಡನ ಪುತ್ರನ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಂತ್ರಸ್ತ ಯುವತಿ ಗಂಡು ಮಗುವಿಗೆ ಜನ್ಮ ನೀಡಿವುದಾಗಿ ತಿಳಿದುಬಂದಿದೆ. ಆರೋಪಿ ಕೃಷ್ಣ ರಾವ್ ಎಂಬಾತನ ವಿರುದ್ಧ ಅತ್ಯಾಚಾರ ಆರೋಪ (Physical Abuse Case) ಕೇಳಿಬಂದಿತ್ತು. ತನ್ನ ಸಹಪಾಠಿ ವಿದ್ಯಾರ್ಥಿನಿಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ ಆರೋಪಿ, ಆಕೆಯ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಗರ್ಭಿಣಿಯಾದ ವಿಚಾರ ತಿಳಿದು ಮದುವೆಯಾಗಲು ನಿರಾಕರಿಸಿದ್ದ. ಈ ಸಂಬಂಧ ಯುವತಿ ನೀಡಿದ ದೂರಿನ ಮೇರೆಗೆ ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಎಂಬುವರ ಪುತ್ರ ಕೃಷ್ಣ ರಾವ್ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಗರ್ಭಿಣಿ ಯುವತಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಜನನವಾದ ಹಿನ್ನೆಲೆಯಲ್ಲಿ ತನಿಖೆ ಹೊಸ ದಾರಿ ಹಿಡಿದಿದ್ದು, ಮಗುವಿನ ಡಿಎನ್ಎ ಪರೀಕ್ಷೆ ಮೂಲಕ ಪ್ರಕರಣ ಭೇದಿಸಲು ಪೊಲೀಸರು ಮುಂದಾಗಿದ್ದಾರೆ.
ಸಂತ್ರಸ್ತ ಯುವತಿ ಹಾಗೂ ಆರೋಪಿ ಕೃಷ್ಣ ಪುತ್ತೂರಿನಲ್ಲಿ ಹೈಸ್ಕೂಲ್ನಲ್ಲಿ ಓದುವಾಗ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇಬ್ಬರೂ ಮಂಗಳೂರಿನ ಖಾಸಗಿ ಕಾಲೇಜಿಗೆ ಸೇರಿಕೊಂಡಿದ್ದರು. 2024ರ ಅಕ್ಟೋಬರ್ 11ರಂದು ಶ್ರೀಕೃಷ್ಣ ಮನೆಯಲ್ಲಿ ಯಾರೂ ಇಲ್ಲದಾಗ ಯುವತಿಯನ್ನು ಮನೆಗೆ ಕರೆಸಿಕೊಂಡು ಆಕೆಯ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ. ನಂತರ 2025ರ ಜನವರಿ ತಿಂಗಳಿನಲ್ಲಿ ಮತ್ತೆ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದ. ಇದರಿಂದ ತಾನು ಗರ್ಭಿಣಿ ಆಗಿರುವ ವಿಚಾರವನ್ನು ಯುವತಿ ಕೃಷ್ಣ ರಾವ್ ಗೆ ತಿಳಿಸಿದ್ದಳು. ಇದರಿಂದ ಮದುವೆಯಾಗಲು ಕೃಷ್ಣ ರಾವ್ ನಿರಾಕರಿಸಿದ್ದ.
ಇದರಿಂದ ನೊಂದ ಯುವತಿ ಜೂನ್ 24ರಂದು ರಾತ್ರಿ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಾದ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಕೃಷ್ಣ ರಾವ್ ತಲೆ ಮರೆಸಿಕೊಂಡಿದ್ದಾನೆ. ಸದ್ಯ ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪುತ್ತೂರು ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ 64(1) ಹಾಗೂ 69ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ತಲೆಮರೆಸಿಕೊಂಡಿರುವ ಆರೋಪಿ ಕೃಷ್ಣ ರಾವ್ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.