ನವದೆಹಲಿ: ಬಿಜೆಪಿಗೆ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯೇ ಒಂದು (BJP President) ಕಗ್ಗಂಟಾಗಿದೆ. ಈ ಹಿಂದೆ ಪಕ್ಷದ ಪಾಳಯದಲ್ಲಿ ಹಲವರ ಹೆಸರು ಕೇಳಿ ಬಂದಿತ್ತು. ಇದೀಗ ಬಿಜೆಪಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಈ ಬಾರಿ ಮಹಿಳೆಗೆ ಅಧ್ಯಕ್ಷ ಪಟ್ಟವನ್ನು ಕಟ್ಟಲು ತಯಾರಿ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಈ ಮೂಲಕ ಬಿಜೆಪಿ ಐತಿಹಾಸಿಕ ನಿರ್ಣಯಕ್ಕೆ ಮುಂದಾಗಿದೆ. ಇದಕ್ಕೆ ಆರ್ಎಸ್ಎಸ್ ಕೂಡಾ ಸಮ್ಮತಿ ಸೂಚಿಸಿದೆ ಎಂದು ಮೂಲಗಳು ಹೇಳಿವೆ. ಈ ಹಿಂದೆ ಧರ್ಮೇಂದ್ರ ಪ್ರಧಾನ್, ಮನೋಹರ್ ಲಾಲ್ ಖಟ್ಟರ್, ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಅನೇಕರ ಹೆಸರು ಓಡಾಡುತ್ತಿತ್ತು.
ಪಕ್ಷದ ಉನ್ನತ ಮಟ್ಟದಲ್ಲಿ ನಡೆಯುತ್ತಿರುವ ಗಹನ ಚರ್ಚೆಗಳ ನಂತರ, ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಲು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಚಿಂತನೆ ನಡೆಸಿದೆ. ಬಿಜೆಪಿಯ ಹಾಲಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಅಧಿಕಾರಾವಧಿ ಜನವರಿ 2023ಕ್ಕೇ ಕೊನೆಗೊಂಡಿತ್ತು. ಆದರೆ, ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಅವರ ಅಧಿಕಾರವನ್ನು ಜೂನ್ 2024ರವರೆಗೆ ವಿಸ್ತರಿಸಲಾಗಿತ್ತು. ಚುನಾವಣೆ ಮುಗಿದ ಕೂಡಲೇ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಅದನ್ನು ಮುಂದಡಲಾಗಿತ್ತು. ಜುಲೈ ಎರಡನೇ ವಾರದಲ್ಲಿ ಪಕ್ಷದ ಹೊಸ ರಾಷ್ಟ್ರೀಯ ಅಧ್ಯಕ್ಷರ ಹೆಸರನ್ನು ಘೋಷಿಸುವ ಸಾಧ್ಯತೆಯಿದ್ದು, ಈ ಬಾರಿ ಮಹಿಳೆಗೆ ಅಧ್ಯಕ್ಷ ಸ್ಥಾನ ನೀಡಲು ಯೋಜಿಸಿರುವುದು ಹಲವರ ಹುಬ್ಬೇರಿಸಿದೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ನಾಯಕತ್ವವು ಮೂವರು ಮಹಿಳೆಯರ ಹೆಸರುಗಳನ್ನು ಸೂಚಿಸಲಾಗಿದೆ.
ಪಕ್ಷದ ಉನ್ನತ ಹುದ್ದೆಗೆ ನಿರ್ಮಲಾ ಸೀತಾರಾಮನ್ (Nirmala Sitharaman), ಡಿ ಪುರಂದೇಶ್ವರಿ ಮತ್ತು ವನತಿ ಶ್ರೀನಿವಾಸನ್ ಅವರಂತಹ ನಾಯಕಿಯರ ಹೆಸರುಗಳು ಮುನ್ನಲೆಗೆ ಬಂದಿವೆ. ಇತ್ತೀಚೆಗಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೊಂದಿಗೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದರು.
ದಕ್ಷಿಣದ ಮೇಲೆ ಬಿಜೆಪಿ ಕಣ್ಣು?
ಪ್ರಧಾನಿ ಮೋದಿ ವಿದೇಶ ಪ್ರವಾಸದಿಂದ ಹಿಂದಿರುಗಿದ ಕೂಡಲೇ ಅಧ್ಯಕ್ಷರ ಆಯ್ಕೆ ನಡೆಯಲಿದೆ. ದಕ್ಷಿಣ ಭಾರತದವರನ್ನು ನೇಮಿಸಿದರೆ ಇಲ್ಲಿ ಹೆಚ್ಚು ಪ್ರಾಬಲ್ಯ ಸಿಕ್ಕಂತಾಗುತ್ತದೆ ಎಂಬುದ ಬಿಜೆಪಿಯ ಆಲೋಚನೆ. ನಿರ್ಮಲಾ ಸೀತಾರಾಮನ್ ಅವರ ಅನುಭವ, ನಾಯಕತ್ವದ ಗುಣಗಳು, ಮತ್ತು ಪಕ್ಷ ಸಂಘಟನೆಯಲ್ಲಿನ ಅವರ ಹಿಡಿತವನ್ನು ಪಕ್ಷದೊಳಗಿನ ನಾಯಕರು ಶ್ಲಾಘಿಸುತ್ತಿದ್ದಾರೆ. ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದರೆ, ದಕ್ಷಿಣ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ತಮಿಳುನಾಡಿನಲ್ಲಿ ಪಕ್ಷದ ಬಲವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂಬುದು ಪಕ್ಷದ ಆಲೋಚನೆ.
ಈ ಸುದ್ದಿಯನ್ನೂ ಓದಿ: CM Siddaramaiah: ನಿರ್ಮಲಾ ಸೀತಾರಾಮನ್ ಭೇಟಿಯಾದ ಸಿಎಂ ಸಿದ್ದರಾಮಯ್ಯ; ರಾಜ್ಯಗಳ ಬೆಳವಣಿಗೆಗೆ ಪೂರಕವಾಗಿ ತೆರಿಗೆ ಹಂಚಿಕೆ ಮಾಡುವಂತೆ ಮನವಿ
ವಕೀಲೆಯಿಂದ ರಾಜಕಾರಣಿಯಾಗಿ ಬಂದ ವನತಿ ಶ್ರೀನಿವಾಸ್ ಕೂಡ ತಮಿಳುನಾಡಿನವರು. ಇವರೂ ಕೂಡ ರೇಸ್ನಲ್ಲಿದ್ದಾರೆ. 1993 ರಲ್ಲಿ ಬಿಜೆಪಿ ಸೇರಿದಾಗಿನಿಂದ, ವನತಿ ರಾಜ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ತಮಿಳುನಾಡಿನ ಉಪಾಧ್ಯಕ್ಷರು ಸೇರಿದಂತೆ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆಂಧ್ರಪ್ರದೇಶದ ರಾಜಮಂಡ್ರಿ ಬಿಜೆಪಿ ಸಂಸದೆ ದಗ್ಗುಬಾಟಿ ಪುರಂದೇಶ್ವರಿ ಅವರ ಹೆಸರು ಕೂಡ ರೇಸ್ನಲ್ಲಿದೆ. ಹಿರಿಯ ನಾಯಕಿ ಪುರಂದೇಶ್ವರಿ ಈಗಾಗಲೇ ಹಲವಾರು ಪ್ರಮುಖ ಹುದ್ದೆಗಳಲ್ಲಿದ್ದಾರೆ.