ನವದೆಹಲಿ:
‘ಆಪರೇಷನ್ ಸಿಂಧೂರ್ ‘ ವೇಳೆ ಪಾಕಿಸ್ತಾನಕ್ಕೆ ಚೀನಾ ಮತ್ತು ಟರ್ಕಿ ಹೇಗೆಲ್ಲಾ ನೆರವು ನೀಡಿದವು ಎಂಬುದನ್ನು ಸೇನೆಯ ಉಪ ಮುಖ್ಯಸ್ಥರಾಗಿರುವ ಲೆಫ್ಟಿನೆಂಟ್ ಜನರಲ್ ರಾಹುಲ್ ಆರ್ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.ಭಾರತಕ್ಕೆ ತೊಂದರೆ ನೀಡುವ ಸಲುವಾಗಿ ಪಾಕಿಸ್ತಾನವನ್ನು ಬಳಸಿಕೊಂಡ ಚೀನಾ ನಾಲ್ಕು ದಿನಗಳ ಭಾರತ-ಪಾಕಿಸ್ತಾನ ಸೇನಾ ಸಂಘರ್ಷದ ಸಂದರ್ಭದಲ್ಲಿ ಸಾಧ್ಯವಿರುವ ಎಲ್ಲಾ ರೀತಿಯ ನೆರವು ನೀಡಿತ್ತು ಎಂದು ಅವರು ಹೇಳಿದ್ದಾರೆ.
FICCI ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಲೆಫ್ಟಿನೆಂಟ್ ಜನರಲ್, ತನ್ನ ವಿವಿಧ ಶಸಾಸ್ತ್ರಗಳನ್ನು ಪರೀಕ್ಷಿಸಲು ಭಾರತ ಮತ್ತು ಪಾಕ್ ಸಂಘರ್ಷವನ್ನು “ಲೈವ್ ಲ್ಯಾಬ್” ರೀತಿ ಬಳಸಿಕೊಂಡ ಚೀನಾ, ಪಾಕಿಸ್ತಾನಕ್ಕೆ ಲೈವ್ ಅಪ್ಡೇಟ್ ನೀಡುತಿತ್ತು ಎಂದು ಹೇಳಿದರು.
ನಮಗೆ ಒಂದು ಗಡಿ ಮತ್ತು ಇಬ್ಬರು ಎದುರಾಳಿಗಳಿದ್ದರು, ವಾಸ್ತವವಾಗಿ ಮೂವರಿದ್ದರು. ಎದುರಾಳಿಯಾಗಿದ್ದ ಪಾಕಿಸ್ತಾನಕ್ಕೆ ಚೀನಾ ಎಲ್ಲಾ ರೀತಿಯ ಬೆಂಬಲ ನೀಡುತಿತ್ತು. ಪಾಕಿಸ್ತಾನದ ಶೇ. 81 ರಷ್ಟು ಮಿಲಿಟರಿ ಸರಕುಗಳು ಚೀನಾದವು. ಇತರ ಶಸಾಸ್ತ್ರಗಳೊಂದಿಗೆ ತನ್ನ ಸಶಸ್ತ್ರಗಳನ್ನು ಪರೀಕ್ಷಿಸಲು ಚೀನಾಕ್ಕೆ ಸೇನಾ ಸಂಘರ್ಷ ಲೈವ್ ಲ್ಯಾಬ್ನಂತಿತ್ತು ಎಂದರು. ಟರ್ಕಿ ಕೂಡಾ ಚೀನಾದಂತೆಯೇ ಪಾಕಿಸ್ತಾನಕ್ಕೆ ನೆರವು ನೀಡಿದೆ. DGMO ಮಟ್ಟದ ಮಾತುಕತೆಗಳು ನಡೆಯುತ್ತಿರುವಾಗ, ನಮ್ಮ ಪ್ರಮುಖ ಯುದ್ಧ ವಿಮಾನಗಳ ಬಗ್ಗೆ ಚೀನಾದಿಂದ ಲೈವ್ ಅಪ್ಡೇಟ್ಗಳನ್ನು ಪಾಕಿಸ್ತಾನ ಪಡೆದಿತ್ತು ಎಂದು ತಿಳಿಸಿದರು.
ಚೀನಾ-ಪಾಕಿಸ್ತಾನಕ್ಕೆ ತಕ್ಕ ಎದಿರೇಟು ನೀಡಲು ದೃಢವಾದ ವಾಯು ರಕ್ಷಣಾ ವ್ಯವಸ್ಥೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ ರಾಹುಲ್ ಆರ್ ಸಿಂಗ್, ಈ ಬಾರಿ ನಾವು ಹೆಚ್ಚಿನದಾಗಿ ಗಮನ ಹರಿಸಲು ಸಾಧ್ಯವಾಗಲಿಲ್ಲ. ಆದರೆ ಮುಂದಿನ ಬಾರಿ ನಾವು ಸಿದ್ಧರಾಗಿರಬೇಕು. ನಮಗೆ ದೃಢವಾದ ವಾಯು ರಕ್ಷಣಾ ವ್ಯವಸ್ಥೆ ಬೇಕು ಎಂದು ಅವರು ಹೇಳಿದರು.ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ನಿಖರವಾದ ದಾಳಿ ನಡೆದ ಭಾರತೀಯ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ ಲೆಫ್ಟಿನೆಂಟ್ ಜನರಲ್ ರಾಹುಲ್ ಆರ್ ಸಿಂಗ್, ಆಪರೇಷನ್ ಸಿಂಧೂರ್ನಿಂದ ಕೆಲವು ಪಾಠ ಕಲಿತಿದ್ದೇವೆ. ನಾಯಕತ್ವದಿಂದ ಬಂದ ಕಾರ್ಯತಂತ್ರದ ಸಂದೇಶ ಸ್ಪಷ್ಪವಾಗಿತ್ತು.
ಮಾನವ ಗುಪ್ತಚರ ಮತ್ತು ತಂತ್ರಜ್ಞಾನ ಬಳಸಿ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ದಾಳಿ ಯೋಜಿಸಲಾಗಿತ್ತು. ಹೀಗಾಗಿ 21 ಉಗ್ರರ ಮೂಲಸೌಕರ್ಯಗಳನ್ನು ಟಾರ್ಗೆಟ್ ಮಾಡಲಾಗಿತ್ತು. ಅದರಲ್ಲಿ ಒಂಬತ್ತು ಉಗ್ರರ ನೆಲೆ ಧ್ವಂಸಗೊಳಿಸಲಾಗಿದೆ ಎಂದು ತಿಳಿಸಿದರು.ಸೇನೆಯ ಮೂರು ವಿಭಾಗಗಳು ಸರಿಯಾದ ಮಾಹಿತಿ ಕಳುಹಿಸಲು ಈ ವಿಧಾನ ಅನುಸರಿಸಲು ನಿರ್ಧಾರಿಸಲಾಯಿತು. ನಮ್ಮ ಉದ್ದೇಶ ಈಡೇರಿದಾಗ ಅದನ್ನು ನಿಲ್ಲಿಸಲು ಕಡಿಮೆ ಮಾಡಬೇಕು. ಯುದ್ಧ ಆರಂಭಿಸುವುದು ಸುಲಭ. ಆದರೆ ನಿಲ್ಲಿಸುವುದು ಬಹಳ ಕಷ್ಟ ಎಂದು ಸೇನೆಯ ಉಪ ಮುಖ್ಯಸ್ಥರು ತಿಳಿಸಿದರು.