[ad_1]
ಮೆಲ್ಬರ್ನ್: ವಿಶ್ವದ ನಂಬರ್ 1 ಆಟಗಾರ್ತಿ, ಹಾಲಿ ಚಾಂಪಿಯನ್(Australian Open) ಅರಿನಾ ಸಬಲೆಂಕಾ(Aryna Sabalenka) ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಮೂರನೇ ಬಾರಿಗೆ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಬಲೆಂಕಾ ಅವರು ಪೌಲಾ ಬಡೋಸಾ(Paula Badosa) ವಿರುದ್ಧ 6-4, 6-2 ನೇರ ಸೆಟ್ಗಳಿಂದ ಅಧಿಕಾರಯುತ ಗೆಲುವು ಸಾಧಿಸಿದರು. ಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಇಗಾ ಸ್ವಿಯಾಟೆಕ್ ಮತ್ತು ಅಮೆರಿಕದ 19 ನೇ ಶ್ರೇಯಾಂಕದ ಮ್ಯಾಡಿಸನ್ ಕೀಸ್ ನಡುವಣ ವಿಜೇತರನ್ನು ಎದುರಿಸಲಿದ್ದಾರೆ. ಅರಿನಾ ಸಬಲೆಂಕಾ ಒಟ್ಟು 2 ಆಸ್ಟ್ರೇಲಿಯ ಓಪನ್ ಮತ್ತು ಒಂದು ಯುಎಸ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ.
‘ಈ ಗೆಲುವನ್ನು ನಾನು ಸಂಭ್ರಮಿಸುವುದಿಲ್ಲ. ಏಕೆಂದರೆ ಪೌಲಾ ಬಡೋಸಾ ನನ್ನ ಆತ್ಮೀಯ ಸ್ನೇಹಿತೆ. ಫೈನಲ್ ಬಳಿಕ ನಾವಿಬ್ಬರು ಜತೆಯಾಗಿ ಶಾಪಿಂಗ್ ಮಾಡಲು ಹೋಗುತ್ತೇವೆ’ ಎಂದು ಸಬಲೆಂಕಾ ಗೆಲುವಿನ ಬಳಿಕ ಭಾವುಕ ಮಾತುಗಳನ್ನಾಡಿದರು.
ನಾಳೆ ನಡೆಯುವ ಪುರುಷರ ಎರಡು ಸಿಂಗಲ್ಸ್ ಸೆಮಿ ಫೈನಲ್ ಪಂದ್ಯದಲ್ಲಿ ಅನುಭವಿ ನೊವಾಕ್ ಜೊಕೊವಿಕ್ ಮತ್ತು ಅಲೆಕ್ಸಾಂಡರ್ ಜ್ವೆರೆವ್, ಮತ್ತೊಂದು ಪಂದ್ಯದಲ್ಲಿ ಜಾನಿಕ್ ಸಿನ್ನರ್ ಮತ್ತು ಬೆನ್ ಶೆಲ್ಟನ್ ಮುಖಾಮುಖಿಯಾಗಲಿದ್ದಾರೆ.
ಮಂಗಳವಾರ ನಡೆದಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೋಕೊ ಸ್ಪೇನ್ನ ಕಾರ್ಲೋಸ್ ಅಲ್ಕರಾಜ್ ವಿರುದ್ಧ ನಾಲ್ಕು ಸೆಟ್ಗಳ ಹೋರಾಟದಲ್ಲಿ 4-6, 6-4, 6-3, 6-4 ಸೆಟ್ಗಳಿಂದ ಗೆದ್ದು ಬೀಗಿದ್ದರು. ಜ್ವರೇವ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 12ನೇ ಶ್ರೇಯಾಂಕದ ಟಾಮಿ ಪೌಲ್ ವಿರುದ್ಧ ನಾಲ್ಕು ಸೆಟ್ಗಳ ಕಠಿನ ಹೋರಾಟದಲ್ಲಿ 7-6 (7-1), 7-6 (7-0), 2-6, 6-1 ಅಂತರದ ಪ್ರಯಾಸದ ಗೆಲುವು ಸಾಧಿಸಿದ್ದರು.
ಬೆನ್ ಶೆಲ್ಟನ್ ಇಟಲಿಯ ಲೊರೆಂಜೊ ಸೊನೆಗೊ ಅವರಿಗೆ 6-4, 7-5, 4-6, 7-6(4) ಸೋಲುಣಿಸಿದ್ದರು. ಇದು ಶೆಲ್ಟನ್ ಕಾಣುತ್ತಿರುವ ಮೊದಲ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್. 2023ರ ಯುಎಸ್ ಓಪನ್ ಟೂರ್ನಿಯಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದರೂ ಅಲ್ಲಿ ನೊವಾಕ್ ಜೋಕೋವಿಕ್ ವಿರುದ್ಧ ಸೋಲು ಕಂಡಿದ್ದರು.
[ad_2]
Source link