ಲೀಡ್ಸ್: ಐದು ಶತಕಗಳನ್ನು ದಾಖಲಿಸಿದರೂ ಬೌಲಿಂಗ್ ವೈಫಲ್ಯದಿಂದ ಭಾರತ ತಂಡ (India), ಮೊದಲನೇ ಟೆಸ್ಟ್ ಪಂದ್ಯದಲ್ಲಿ(IND vs ENG) ಇಂಗ್ಲೆಂಡ್ ಎದುರು 5 ವಿಕೆಟ್ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ 0-1 ಹಿನ್ನಡೆ ಅನುಭವಿಸಿತು. ಐದನೇ ದಿನ ಬೆನ್ ಡಕೆಟ್ (149 ರನ್) ಅವರ ಆಕರ್ಷಕ ಶತಕ ಹಾಗೂ ಝ್ಯಾಕ್ ಕ್ರಾವ್ಲಿ ಅವರ ಅರ್ಧಶತಕದ ಬಲದಿಂದ ಇಂಗ್ಲೆಂಡ್ (England) ತಂಡ ತವರು ಅಭಿಯಾನಿಗಳ ಎದುರು ಮೊದಲನೇ ಪಂದ್ಯವನ್ನು ಗೆದ್ದು ಟೆಸ್ಟ್ ಸರಣಿಯಲ್ಲಿ ಶುಭಾರಂಭ ಕಂಡಿದೆ.
ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಮಂಗಳವಾರ ವಿಕೆಟ್ ನಷ್ಟವಿಲ್ಲದೆ 26 ರನ್ಗಳಿಂದ ಐದನೇ ದಿನದಾಟವನ್ನು ಆರಂಭಿಸಿದ ಇಂಗ್ಲೆಂಡ್ ತಂಡ ಟೆಸ್ಟ್ ಇತಿಹಾಸದಲ್ಲಿ 10ನೇ ದೊಡ್ಡ ರನ್ ಚೇಸ್ ಅನ್ನು ಪೂರ್ಣಗೊಳಿಸಿದೆ. ಭಾರತ ತಂಡ, ಇಂಗ್ಲೆಂಡ್ಗೆ ಗೆಲ್ಲಲು 371 ರನ್ಗಳ ಗುರಿಯನ್ನು ನೀಡಿತ್ತು. ಬೆನ್ ಸ್ಟೋಕ್ಸ್ ಪಡೆ 5 ವಿಕೆಟ್ ನಷ್ಟಕ್ಕೆ ಪಂದ್ಯವನ್ನು ಗೆದ್ದುಕೊಂಡಿತು. ಇದು ಭಾರತದ ವಿರುದ್ಧದ ಟೆಸ್ಟ್ ಇತಿಹಾಸದಲ್ಲಿ ಎರಡನೇ ಅತಿದೊಡ್ಡ ರನ್ ಚೇಸ್ ಆಗಿದೆ. ಇಂಗ್ಲೆಂಡ್ ಕೂಡ ಅತಿ ದೊಡ್ಡ ರನ್ ಚೇಸ್ ದಾಖಲೆಯನ್ನು ಹೊಂದಿದೆ. 2022 ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ಭಾರತ ವಿರುದ್ಧದ ನಾಲ್ಕನೇ ಇನಿಂಗ್ಸ್ನಲ್ಲಿ ಇಂಗ್ಲೆಂಡ್, 378 ರನ್ಗಳ ಗುರಿಯನ್ನು ಚೇಸ್ ಮಾಡಿತ್ತು.
IND vs ENG: ಶತಕ ಬಾರಿಸಿ ಜೋ ರೂಟ್ರ ದಾಖಲೆ ಮುರಿದ ಬೆನ್ ಡಕೆಟ್!
ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಭಾರತ 471 ರನ್ ಗಳಿಸಿತು. ಇದರ ನಂತರ, ಇಂಗ್ಲೆಂಡ್ 465 ರನ್ ದಾಖಲಿಸಿತು. ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 364 ರನ್ಗಳನ್ನು ಗಳಿಸಿತ್ತು. ಆ ಮೂಲಕ ಇಂಗ್ಲೆಂಡ್ಗೆ 371 ರನ್ ಗುರಿಯನ್ನು ನೀಡಿತ್ತು. ಅದರಂತೆ ಬೆನ್ ಡಕೆಟ್ (147 ರನ್) ಶತಕ, ಝ್ಯಾಕ್ ಕ್ರಾವ್ಲಿ (65) ಹಾಗೂ ಜೋ ರೂಟ್ (53*) ಅವರ ಅರ್ಧಶತಕಗಳ ಬಲದಿಂದ ಇಂಗ್ಲೆಂಡ್ ಯಶಸ್ವಿಯಾಗಿ ಗುರಿ ಮುಟ್ಟಿತು. ಆ ಮೂಲಕ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪಾಯಿಂಟ್ಸ್ ಟೇಬಲ್ನಲ್ಲಿ ಖಾತೆ ತೆರೆದಿದೆ.
ಗಿಲ್ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ಸೋಲು
ಇದು ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತದ ಮೊದಲ ಟೆಸ್ಟ್ ಪಂದ್ಯವಾಗಿತ್ತು. ಈ ಪಂದ್ಯವು ಗಿಲ್-ಗಂಭೀರ್ ಯುಗದ ಆರಂಭವನ್ನು ಸೂಚಿಸಿತು ಆದರೆ ತಂಡವು ಅವಮಾನಕರ ಸೋಲನ್ನು ಅನುಭವಿಸಿತು. ಪಂದ್ಯದಲ್ಲಿ ಎರಡೂ ಇನಿಂಗ್ಸ್ಗಳಿಂದ ಭಾರತ, 835 ರನ್ ಗಳಿಸಿತು. ತಂಡದ ಬ್ಯಾಟ್ಸ್ಮನ್ಗಳು 5 ಶತಕಗಳನ್ನು ಗಳಿಸಿದರು. ಇಲ್ಲಿಯವರೆಗೆ, ಭಾರತ ಯಾವುದೇ ಟೆಸ್ಟ್ನಲ್ಲಿ 5 ಶತಕಗಳನ್ನು ಗಳಿಸಿರಲಿಲ್ಲ. ಇದರ ನಂತರವೂ, ಟೀಮ್ ಇಂಡಿಯಾ ಪಂದ್ಯವನ್ನು ಸೋತಿರುವುದು ನಾಚಿಕೆಗೇಡಿನ ಸಂಗತಿ.
🏴 ENGLAND WIN! 🏴
Root and Smith finish off a monster chase at Headingley to put us 1-0 up in the series!!! pic.twitter.com/G0IbjA3pEC
— England Cricket (@englandcricket) June 24, 2025
ಇದಕ್ಕೂ ಮೊದಲು ಭಾರತ ತಂಡ ತನ್ನ ಪ್ರಥಮ ಇನಿಂಗ್ಸ್ನಲ್ಲಿ ದೊಡ್ಡ ಸ್ಕೋರ್ ಗಳಿಸಿದ ನಂತರ ಒಮ್ಮೆ ಮಾತ್ರ ಸೋಲು ಅನುಭವಿಸಿತ್ತು. 2008ರ ಸಿಡ್ನಿ ಟೆಸ್ಟ್ನಲ್ಲಿ ಭಾರತ 532 ರನ್ ಗಳಿಸಿದರೂ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಇಲ್ಲಿಯವರೆಗೆ ಟೆಸ್ಟ್ ಇತಿಹಾಸದಲ್ಲಿ ಕೇವಲ ನಾಲ್ಕು ಬಾರಿ ಮಾತ್ರ 835 ಕ್ಕಿಂತ ಹೆಚ್ಚು ರನ್ ಗಳಿಸಿದರೂ ತಂಡವು ಪಂದ್ಯವನ್ನು ಸೋತಿದೆ. 1948 ರಲ್ಲಿ ಇದೇ ಮೈದಾನದಲ್ಲಿ ಇಂಗ್ಲೆಂಡ್ 861 ರನ್ ಗಳಿಸಿದ ನಂತರ ಸೋಲು ಅನುಭವಿಸಿತ್ತು. 2022ರಲ್ಲಿ ಪಾಕಿಸ್ತಾನ 847 ರನ್ ಗಳಿಸಿದ ನಂತರ ಇಂಗ್ಲೆಂಡ್ ವಿರುದ್ಧ ಪರಾಭವಗೊಂಡಿತ್ತು ಮತ್ತು ನ್ಯೂಜಿಲೆಂಡ್ 837 ರನ್ ಗಳಿಸಿದ ನಂತರ ಇಂಗ್ಲೆಂಡ್ ವಿರುದ್ಧ ಸೋತಿತ್ತು.
ಬೆನ್ ಡಕೆಟ್ ಭರ್ಜರಿ ಶತಕ
ಇಂಗ್ಲೆಂಡ್ ಪರ ನಾಲ್ಕನೇ ಇನಿಂಗ್ಸ್ನಲ್ಲಿ ಬೆನ್ ಡಕೆಟ್ ಭರ್ಜರಿ ಶತಕ ಬಾರಿಸಿದರು. ಡಕೆಟ್ ಆರಂಭಿಕರಾಗಿ ಬ್ಯಾಟಿಂಗ್ ಆರಂಭಿಸಿ 149 ರನ್ ಗಳಿಸಿದರು. ಅವರು ಕೇವಲ 170 ಎಸೆತಗಳಲ್ಲಿ 21 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಇದು ಟೆಸ್ಟ್ ಪಂದ್ಯದ ನಾಲ್ಕನೇ ಇನಿಂಗ್ಸ್ನಲ್ಲಿ ಭಾರತದ ವಿರುದ್ಧ ಯಾವುದೇ ಬ್ಯಾಟ್ಸ್ಮನ್ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಡಕೆಟ್ ಝ್ಯಾಕ್ ಕ್ರಾವ್ಲಿ ಅವರೊಂದಿಗೆ ಮೊದಲ ವಿಕೆಟ್ಗೆ 188 ರನ್ಗಳ ಪಾಲುದಾರಿಕೆಯನ್ನು ಗಳಿಸಿದರು. ಇದು ಟೆಸ್ಟ್ ಇತಿಹಾಸದಲ್ಲಿ ಇಂಗ್ಲೆಂಡ್ ಪರ ನಾಲ್ಕನೇ ಇನಿಂಗ್ಸ್ನಲ್ಲಿ ಅತಿ ಹೆಚ್ಚು ಆರಂಭಿಕ ಪಾಲುದಾರಿಕೆಯಾಗಿದೆ. ಜೋ ರೂಟ್ 53 ರನ್ ಗಳಿಸಿ ಅಜೇಯರಾಗಿ ಉಳಿದರೆ, ಜೇಮೀ ಸ್ಮಿತ್ 44 ರನ್ ಗಳಿಸಿ ಅಜೇಯರಾಗಿ ಉಳಿದರು.