[ad_1]
ಬೆಂಗಳೂರು: ಪಾಲಕರ ವಿರೋಧದ ನಡುವೆ ಪ್ರೀತಿಸಿದ ಹುಡುಗನೊಂದಿಗೆ ಗಾಯಕಿ ಪೃಥ್ವಿ ಭಟ್ ವಿವಾಹವಾಗಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಪೃಥ್ವಿ ಭಟ್ ಅವರ ತಂದೆ ಶಿವಕುಮಾರ್ ಭಟ್ ಅವರು, ತಮ್ಮ ಮಗಳನ್ನು ವಶೀಕರಣ ಮಾಡಿ ಮದುವೆ ಮಾಡಿಸಲಾಗಿದೆ. ಇದರ ಹಿಂದೆ ಜೀ ಕನ್ನಡದ ರಿಯಾಲಿಟಿ ಶೋನ ಜ್ಯೂರಿ ನರಹರಿ ದೀಕ್ಷಿತ್ ಅವರ ಕೈವಾಡವಿದೆ ಎಂದು ಆರೋಪಿಸಿದ್ದರು. ಆದರೆ, ಈ ಆರೋಪಗಳನ್ನು ಸ್ವತಃ ಪೃಥ್ವಿ ಭಟ್ ಕೂಡ ನಿರಾಕರಿಸಿದ್ದರು. ಇದೀಗ ಈ ಬಗ್ಗೆ ಗಾಯಕ ಹಾಗೂ ಸುಗಮ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಪ್ರತಿಕ್ರಿಯಿಸಿದ್ದು, ಪೃಥ್ವಿ ಭಟ್ ಅವರ ತಂದೆ ತನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿದ್ದು, ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರದ ಮೂಲಕ ನರಹರಿ ದೀಕ್ಷಿತ್ ಅವರು ಸ್ಪಷ್ಟನೆ ನೀಡಿದ್ದು, ಪ್ರೀತಿಯ ರಾಮಚಂದ್ರಪುರ ಮಠದ ಬಂಧುಗಳೇ, ಗಿರಿನಗರ ಹವ್ಯಕ ವಲಯ ಪದಾಧಿಕಾರಿಗಳೇ ಹಾಗೂ ನನ್ನೆಲ್ಲಾ ಹವ್ಯಕ ಸ್ನೇಹಿತರೇ… ನಾನು ನಿಮ್ಮೆಲ್ಲರ ಸಮಕ್ಷಮದಲ್ಲಿ ಮುಖ್ಯವಾದ ವಿಷಯ ಹಂಚಿಕೊಳ್ಳಲು ಬಯಸುವೆ. ಅದು ಏನೆಂದರೆ, ನನ್ನ ವಿದ್ಯಾರ್ಥಿನಿ ಕು.ಪೃಥ್ವಿ ಭಟ್ ಕಾಸರಗೋಡು, ಮಾರ್ಚ್ 27ರಂದು ಜೀ ಕನ್ನಡ ವಾಹಿನಿಯ ಉದ್ಯೋಗಿ, ಅಸೋಸಿಯೇಟೆಡ್ ಡೈರೆಕ್ಟರ್ ಅಭಿಷೇಕ್ ಅವರೊಂದಿಗೆ ದೇವಸ್ಥಾನದಲ್ಲಿ ವಿವಾಹವಾಗಿದ್ದಾಳೆ. ಅವರು ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿದ್ದಾರೆ. ಆದರೆ, ಮನೆಯವರ ಒಪ್ಪಿಗೆ ಇಲ್ಲದೆ ಇದು ಕಳೆದ 4 ವರ್ಷದ ಹಿಂದೆ ಅವರಿಬ್ಬರಲ್ಲಿ ನಡೆದ ಒಪ್ಪಂದವಾಗಿದೆ ಎಂದು ತಿಳಿಸಿದ್ದಾರೆ.
ಸಹಜವಾಗಿ ತಮ್ಮ ಮಗಳು ಹವ್ಯಕರಲ್ಲದ, ನಮ್ಮವರಲ್ಲದ ಹುಡುಗನನ್ನು ಮದುವೆಯಾಗಿದ್ದು ತಂದೆ-ತಾಯಿಗೆ ತುಂಬಾನೇ ಬೇಸರ ತಂದಿದ್ದು, ಆ ಮದುವೆಯ ವಿಚಾರ ಕಳೆದ 1 ತಿಂಗಳ ಹಿಂದೆ ನನ್ನ ಗಮನಕ್ಕೆ ಬಂದಿತ್ತು. ನಾನು ಪೃಥ್ವಿ ಮನೆಗೆ ಹೋಗಿ ಆಕೆಯ ತಂದೆ ಶಿವಣ್ಣ ಅವರ ಬಳಿ ವಿಚಾರ ತಿಳಿಸಿ, ಪರಿಸ್ಥಿತಿ ಕೈಮೀರಿ ಹೋಗಿದೆ. ಅವರು ಮದುವೆ ಆಗೋದು ನಿಶ್ಚಿತಾ. ನೀವು ಹುಡುಗನನ್ನ ಕರೆಸಿ ಮಾತನಾಡಿ ಎಂದು ಹೇಳಿ ಬಂದಿದ್ದೆ. ಆದರೆ, ಅವರು ಅದನ್ನು ಪರಿಗಣಿಸಲಿಲ್ಲ. ಈಗ ನಾನೇ ಅವರಿಬ್ಬರಿಗೆ ಮದುವೆ ಮಾಡಿಸಿದ್ದು, ಅವರ ಪ್ರೀತಿಗೆ ಉತ್ತೇಜನ ನೀಡಿದ್ದು, ಪೃಥ್ವಿಯ ತಲೆಕೆಡಿಸಿದ್ದು, ಅವರ ಬಾಳು ಹಾಳು ಮಾಡಿದ್ದು ಎಂದು ನನಗೆ ದಿನಕ್ಕೆ 25 ಬಾರಿ ಕಾಲ್ ಮಾಡಿ ನನ್ನ ಮಾನ ಹರಾಜು ಮಾಡುತ್ತೇನೆ, ನನ್ನನ್ನು ಮುಗಿಸುತ್ತೇನೆ ನನ್ನ ಶಾಲೆಯನ್ನು ಮುಚ್ಚಿಸುತ್ತೇನೆ. ನನ್ನ ಹಾಗೂ ನನ್ನ ಹೆಂಡತಿಯನ್ನು ಬೇರೆ ಮಾಡುತ್ತೇನೆ. ಇಡೀ ಹವ್ಯಕ ಪಂಗಡಕ್ಕೆ ಹಾಗೂ ಮಠದಲ್ಲಿ ಕೂಡ ನನ್ನ ಮಾನ ಮರ್ಯಾದೆ ತೆಗೆಯುತ್ತೇನೆ. ನನ್ನ ಜೀವನವನ್ನೇ ಸಂಪೂರ್ಣ ಹಾಳುಮಾಡುತ್ತೇನೆ ಎಂದು ಶಿವಕುಮಾರ್ ಭಟ್ ದಂಪತಿ, ಪೃಥ್ವಿ ಸೋದರ ಮಾವ ಸೇರಿ ಎಲ್ಲರೂ ಕಾಲ್ ಮಾಡಿ ಮಾಡಿ ನನಗೆ ಚಿತ್ರ ಹಿಂಸೆ ಕೊಡುತ್ತಿದ್ದಾರೆ.
ಆದರೆ, ಅಸಲಿ ವಿಷಯ 4 ವರ್ಷದಿಂದ ಅವರಿಗೆ ಗೊತ್ತು. ಈ ವಿಷಯ ಅವರು ಮಗಳಿಗೆ ಅವಕಾಶ ಸಿಗುತ್ತದೆ ಎಂದು ಸುಮ್ಮನೆ ಇದ್ದು, ಈಗ ಕೈ ಮೀರಿದಾಗ ನನ್ನನ್ನು ದೂರುತ್ತಿದ್ದಾರೆ. 30 ವರ್ಷ ನನ್ನ ವೃತ್ತಿ ಜೀವನದಲ್ಲಿ ಪೃಥ್ವಿಯನ್ನು ಸೇರಿ ನೂರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ್ದೇನೆ. ಈ ಮೂಲಕ ನನ್ನ ತಮ್ಮೆಲ್ಲರಲ್ಲಿ ಮನವಿ ಏನೆಂದರೆ, ಅವರು ನಿಮ್ಮ ಬಳಿ ಏನೇ ಹೇಳಿದರೂ, ಅದನ್ನು ನಂಬಬೇಡಿ. ನಾನು ಕಾಲ್ ಮಾಡಿ ಪೃಥ್ವಿ ಹಾಗೂ ಗಂಡನ ಕೂರಿಸಿ ಮಾತಾಡುತ್ತೇನೆ. ಅವರಿಗೆ ತುಂಬಾ ನೋವಾಗಿದೆ ಸಹಜ, ಆದರೆ ಅವರು ಮಾಡಿದ ತಪ್ಪಿಗೆ ನನ್ನನ್ನು ದೂರುತ್ತಿದ್ದಾರೆ. ನಾನೇ ಕಾರಣ ಎಂದು ಹೇಳುತ್ತಿದ್ದಾರೆ. ಅವರಿಬ್ಬರೂ ಪರಸ್ಪರ ಇಷ್ಟ ಪಟ್ಟಿದ್ದಾರೆ. ಯಾರು ಏನು ಮಾಡಲಾಗದು. ಒಂದು ವಾರದಿಂದ ನನ್ನ ಸಂಕಟ ಹೇಳಲಾಗದು. ನೊಂದ ಮನಸ್ಸಿನಿಂದ ಈ ಪತ್ರ ಬರೆಯುತ್ತಿದ್ದೇನೆ. ನನ್ನ ಮುಂದಿನ ಹೋರಾಟ ನನಗೆ ಮಾತನಾಡಿದ್ದನ್ನು ಅವರು ಬಂದು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಾನು ಅವರನ್ನು ಬಿಡುವುದಿಲ್ಲ. ನನಗೆ ಶ್ರೀಧರ ಸ್ವಾಮಿಗಳ ಆಶೀರ್ವಾದ ಹಾಗು ಗುರುಗಳ ಆಶೀರ್ವಾದ ಇದೆ ಎಂದು ನರಹರಿ ದೀಕ್ಷಿತ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Prithvi Bhat Marriage Controversy: ತಪ್ಪಾಯ್ತು ಅಪ್ಪ ದಯವಿಟ್ಟು ಕ್ಷಮಿಸಿ! ಗಾಯಕಿ ಪೃಥ್ವಿ ಭಟ್ ಆಡಿಯೊ ಮೆಸೇಜ್!
[ad_2]
Source link