[ad_1]
ಬೆಂಗಳೂರು: ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ (Alok Mohan) ಅವರ ಅವಧಿಯನ್ನು ಮೇ 21ರವರೆಗೆ ವಿಸ್ತರಣೆ ಮಾಡಲಾಗಿದೆ. 2023ರ ಮೇ 20ರಂದು ಡಿಜಿ-ಐಜಿಪಿಯಾಗಿ (Karnataka DG & IGP) ನೇಮಕವಾಗಿದ್ದ ಇವರು, ಇದೇ ಏಪ್ರಿಲ್ 30ರಂದು ನಿವೃತ್ತಿಯಾಗಬೇಕಿತ್ತು. ಆದರೆ, ಇದೀಗ 22 ದಿನಗಳ ಕಾಲ ಸೇವಾವಧಿಯನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ. ಬಿಹಾರ ಮೂಲದ ಡಾ. ಅಲೋಕ್ ಮೋಹನ್, 1987ನೇ ಬ್ಯಾಚ್ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದು, 36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.
ಕಾರಾಗೃಹ ಇಲಾಖೆ ಡಿಜಿಪಿ, ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ, ಎಸಿಬಿ ಎಡಿಜಿಪಿ ಸೇರಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಸೇವಾ ಜ್ಯೇಷ್ಠತೆ ಆಧಾರದಲ್ಲಿ ಡಿಜಿ-ಐಜಿಪಿ ಹುದ್ದೆಯ ಮೊದಲ ಆಯ್ಕೆಯಾಗಿದ್ದರು. ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಳ್ಳುವ ಮುನ್ನ ಇವರು ಅಗ್ನಿಶಾಮಕದಳ ಹಾಗೂ ತುರ್ತು ಸೇವೆಗಳ ಡಿಜಿಪಿಯಾಗಿದ್ದರು. ಆದರೆ, ನೂತನ ಡಿಜಿ-ಐಜಿಪಿ ನೇಮಕ ಪ್ರಕ್ರಿಯೆ ಅಂತಿಮವಾಗದ ಹಿನ್ನೆಲೆಯಲ್ಲಿ ಇವರ ಸೇವಾವಧಿ ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ.
ನೂತನ ಡಿಜಿಪಿ ರೇಸ್ನಲ್ಲಿ ಯಾರಿದ್ದಾರೆ?
ಹಾಲಿ ಡಿಜಿ-ಐಜಿಪಿ ಅಲೋಕ್ ಮೋಹನ್ ಅವರು ಏ.30ರಂದು ನಿವೃತ್ತಿಯಾಗಬೇಕಿದ್ದ ಹಿನ್ನೆಲೆಯಲ್ಲಿ ನಾಲ್ಕು ತಿಂಗಳು ಅಧಿಕಾರ ವಿಸ್ತರಣೆ ಮಾಡುವಂತೆ ಸರ್ಕಾರವನ್ನು ಅವರು ಕೋರಿದ್ದರು. ಈ ನಡುವೆ ಹೊಸ ಡಿಜಿ-ಐಜಿಪಿ ಆಯ್ಕೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ. ನೂತನ ಡಿಜಿಪಿ ರೇಸ್ನಲ್ಲಿ ಸೇವಾ ಹಿರಿತನ ಮೇರೆಗೆ ಹಾಲಿ ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ಹಾಗೂ ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹೆಸರು ಕೇಳಿ ಬಂದಿದೆ.
ಈ ಇಬ್ಬರಲ್ಲಿ ಕನ್ನಡಿಗ ಸಲೀಂ ಅವರು ಪೊಲೀಸ್ ಇಲಾಖೆಗೆ ನೂತನ ಸಾರಥಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಬೆಂಗಳೂರಿನ ಚಿಕ್ಕಬಾಣಾವರದ ಕರ್ನಾಟಕ ಕೇಡರ್ ಆಗಿರುವ ಸಲೀಂ ಅವರು ಉಡುಪಿ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರು ನಗರ ಪೂರ್ವ ವಿಭಾಗದ ಡಿಸಿಪಿ (ಲಾ ಅಂಡ್ ಆರ್ಡರ್), ಟ್ರಾಫಿಕ್ ಡಿಸಿಪಿ ಹಾಗೂ ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತರಾಗಿದ್ದರು. ಸದ್ಯ ಸಿಐಡಿ ಡಿಜಿಯಾಗಿರುವ ಸಲೀಂ ಅವರು ಅಲ್ಪಸಂಖ್ಯಾತ ಸಮುದಾಯದ ಅಧಿಕಾರಿಯಾಗಿದ್ಧಾರೆ. ಸಂಚಾರ ಕ್ಷೇತ್ರದಲ್ಲಿಯೂ ಡಾಕ್ಟರೇಟ್ ಪದವಿ ಹೊಂದಿದ್ದು, ಇವರನ್ನು ಡಿಜಿಪಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನು ಅಗ್ನಿಶಾಮಕ ಇಲಾಖೆಯ ಡಿಜಿಪಿಯಾಗಿರುವ ಬಿಹಾರ ಮೂಲದ ಕರ್ನಾಟಕ ಕೇಡರ್ ಆಗಿರುವ ಪ್ರಶಾಂತ್ ಕುಮಾರ್ ಠಾಕೂರ್ ಸೇವಾ ಜ್ಯೇಷ್ಠತೆ ಹೊಂದಿದ್ದಾರೆ. ಸಲೀಂ ಅವರಿಗಿಂತ ಒಂದು ವರ್ಷ ಸೇವಾ ಹಿರಿತನ ಹೊಂದಿದ್ದಾರೆ. ಸೀನಿಯಾರಿಟಿ ಮೇರೆಗೆ ಮುಂಬಡ್ತಿ ನೀಡುವ ಪದ್ಧತಿಯನ್ನು ಸರ್ಕಾರ ನಡೆಸಿಕೊಂಡು ಬರುತ್ತಿದೆ. ಒಂದು ವೇಳೆ ಇವರನ್ನು ಬದಿಗೊತ್ತಿ ಡಾ. ಸಲೀಂ ಅವರಿಗೆ ನೀಡಿದರೆ ಮುಂಬಡ್ತಿ ನೀಡದಿರುವುದನ್ನು ಪ್ರಶ್ನಿಸಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಹೋಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
[ad_2]
Source link