
ನವದೆಹಲಿ: ಭಾರತ ತಂಡ ಸದ್ಯ ಇಂಗ್ಲೆಂಡ್ ಎದುರು ಟೆಸ್ಟ್ ಸರಣಿ ಆಡುತ್ತಿರುವ ಬೆನ್ನಲ್ಲೇ ಏಕದಿನ ಮಾದರಿಗೂ ಶುಭ್ಮನ್ ಗಿಲ್ಗೆ ನಾಯಕತ್ವ ಪಟ್ಟ ಕಟ್ಟುವ ಸಾಧ್ಯತೆಯಿದೆ ಎನ್ನುವ ಗಾಳಿಸುದ್ದಿ ಹರಡಲಾರಂಭಿಸಿದೆ. ಹೀಗಾದಲ್ಲಿ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಿಂದಲೂ ಗೇಟ್ಪಾಸ್ ನೀಡುವ ಸಾಧ್ಯತೆಯಿದೆ.
ಟೆಸ್ಟ್ ತಂಡದ ನಾಯಕನಾಗಿ ಮೊದಲ ಸರಣಿಯಲ್ಲೇ ಗಣನೀಯ ಯಶಸ್ಸು ಕಾಣುತ್ತಿರುವ ಶುಭ್ಮನ್ ಗಿಲ್, ಸದ್ಯದಲ್ಲೇ ಭಾರತ ಏಕದಿನ ತಂಡದ ನಾಯಕತ್ವವನ್ನೂ ವಹಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ನಾಯಕನಾಗುತ್ತಿದ್ದಂತೆಯೇ ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ಪ್ರದರ್ಶನ ಕೂಡಾ ಅತ್ಯುತ್ತಮವಾಗಿ ಮೂಡಿಬರಲಾರಂಭಿಸಿದೆ

ಈಗಾಗಲೇ ಟೆಸ್ಟ್ ಹಾಗೂ ಟಿ20 ಮಾದರಿಗಳಿಂದ ನಿವೃತ್ತಿ ಪಡೆದಿರುವ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ಗೂ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ, ಈ ವರ್ಷ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಸರಣಿಗೂ ಮೊದಲೇ ಬಿಸಿಸಿಐ, ಗಿಲ್ಗೆ ನಾಯಕತ್ವದ ಜವಾಬ್ದಾರಿ ವಹಿಸಲಿದೆ ಎಂದು ವರದಿಯಾಗಿದೆ. 2027ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಗಿಲ್ ಮುನ್ನಡೆಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಹೀಗಾಗಿ, ಅವರಿಗೆ ನಾಯಕನಾಗಿ ಅನುಭವ ಸಿಗಲಿ ಎನ್ನುವ ಉದ್ದೇಶದಿಂದ 2 ವರ್ಷ ಮೊದಲೇ ಹುದ್ದೆ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಈ ಮೊದಲು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬೆನ್ನಲ್ಲೇ ರೋಹಿತ್ ಶರ್ಮಾ, 2027ರ ಏಕದಿನ ವಿಶ್ವಕಪ್ ಟೂರ್ನಿಯವರೆಗೂ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿತ್ತು. ಈ ಕಾರಣಕ್ಕಾಗಿಯೇ ರೋಹಿತ್ ಶರ್ಮಾ ಶರ್ಮಾ ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ, ಏಕದಿನ ಕ್ರಿಕೆಟ್ ಮಾದರಿಯಲ್ಲಿ ಮುಂದುವರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿತ್ತು. ಆದರೆ ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆಗುತ್ತಿದ್ದಂತೆಯೇ ತಂಡದಲ್ಲಿ ಕೆಲವೊಂದು ಕ್ರಾಂತಿಕಾರಕ ಬದಲಾವಣೆಗಳು ಆಗುತ್ತಿದ್ದು, ಸದ್ಯದಲ್ಲೇ ಹಿಟ್ಮ್ಯಾನ್ ಅವರನ್ನು ಏಕದಿನ ಮಾದರಿಯಿಂದ ಗೌತಿ ಬದಿಗೆ ಸರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.