[ad_1]
ಉಡುಪಿ: ಝೀ ಕನ್ನಡ ವಾಹಿನಿಯ ಹಾಸ್ಯ ಕಾರ್ಯಕ್ರಮ ʼಕಾಮಿಡಿ ಕಿಲಾಡಿ ಸೀಸನ್ 3ʼರ ವಿನ್ನರ್ ನಟ ರಾಕೇಶ್ ಪೂಜಾರಿ (Rakesh Poojary) ಹೃದಯಾಘಾತದಿಂದ ನಿಧನರಾಗಿ ಸುಮಾರು 21 ದಿನಗಳ ಬಳಿಕ ಸ್ಯಾಂಡಲ್ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ರಿಷಬ್ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಇದ್ದರು. ರಿಷಬ್ ನಟಿಸಿ, ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ (Kantara Chapter 1) ಚಿತ್ರದಲ್ಲಿ ರಾಕೇಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ರಾಕೇಶ್ ಮೃತಪಟ್ಟ ಸಮಯದಲ್ಲಿ ಅವರ ಮನೆಗೆ ಭೇಟಿ ನೀಡಲು ರಿಷಬ್ ಶೆಟ್ಟಿಗೆ ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ ಹಲವರು ಡಿವೈನ್ ಸ್ಟಾರ್ ನಡೆಯನ್ನು ಟೀಕಿಸಿದ್ದರು.
ಉಡುಪಿಯ ಹೂಡೆಯಲ್ಲಿ ರಾಕೇಶ್ ಪೂಜಾರಿ ಮನೆ ಇದೆ. ಜೂ. 2ರಂದು ಅಲ್ಲಿಗೆ ತೆರಳಿದ ರಿಷಬ್ ಶೆಟ್ಟಿ ದಂಪತಿ ರಾಕೇಶ್ ತಂಗಿ ಮತ್ತು ತಾಯಿಗೆ ಸಾಂತ್ವನ ಹೇಳಿದ್ದಾರೆ. ಜತೆಗೆ ರಾಕೇಶ್ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ರಿಷಬ್ ಶೆಟ್ಟಿ ಭರವಸೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Rakesh Poojary: ಕಲಾವಿದನಿಗಿಂತ ಕಮರ್ಶಿಯಲ್ ಹೆಚ್ಚಾಯ್ತಾ? ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆಯದ ರಿಷಬ್ ಶೆಟ್ಟಿ ವಿರುದ್ಧ ನೆಟ್ಟಿಗರು ಗರಂ
ರಾಕೇಶ್ ಪೂಜಾರಿಗೆ ಏನಾಗಿತ್ತು?
ವಿಶಿಷ್ಟ ಮ್ಯಾನರಿಸಂ, ಪಂಚಿಂಗ್ ಡೈಲಾಗ್ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆದ ರಾಕೇಶ್ ಪೂಜಾರಿ ಕೆಲವು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದರು. ಅದರಲ್ಲಿಯೂ ಹೊಂಬಾಳೆ ಫಿಲ್ಮ್ಸ್ನ ಬಹು ನಿರೀಕ್ಷಿತ ʼಕಾಂತಾರ ಚಾಪ್ಟರ್ 1ʼ ಸಿನಿಮಾದಲ್ಲಿ ಅವರಿಗೆ ರಿಷಬ್ ಶೆಟ್ಟಿ ಮುಖ್ಯ ಪಾತ್ರವೊಂದನ್ನು ನೀಡಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ತಮ್ಮ ಪಾಲಿನ ಶೂಟಿಂಗ್ ಮುಗಿಸಿದ್ದ ರಾಕೇಶ್ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆ ಚಿತ್ರ ತೆರೆ ಕಾಣುವ ಮುನ್ನವೇ 33 ವರ್ಷದ ರಾಕೇಶ್ ನಿಧನ ಹೊಂದಿದ್ದರು. ಸ್ನೇಹಿತರೊಬ್ಬರ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರಿಗೆ ಅಲ್ಲಿಯೇ ಹೃದಯಾಘಾತವಾಗಿತ್ತು.
ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗು ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ .. ಮತ್ತೆ ಹುಟ್ಟಿ ಬಾ ಗೆಳೆಯ ..
ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ… pic.twitter.com/x2Cev99kGi
— Rishab Shetty (@shetty_rishab) May 12, 2025
ರಿಷಬ್ ವಿರುದ್ದ ಕೇಳಿ ಬಂದಿತ್ತು ಟೀಕೆ
ರಾಕೇಶ್ ಪೂಜಾರಿ ಅವರ ಅಂತ್ಯಕ್ರಿಯೆ ಹುಟ್ಟೂರು ಉಡುಪಿಯಲ್ಲಿ ನೆರವೇರಿತ್ತು. ಅವರ ಅಂತಿಮ ದರ್ಶನ ಪಡೆಯಲು ಸೆಲೆಬ್ರಿಟಿಗಳು, ಕಲಾವಿದರು ಬೆಂಗಳೂರು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದರು. ಆದರೆ ಉಡುಪಿ ಸಮೀಪದ ಕುಂದಾಪುರದಲ್ಲಿದ್ದರೂ ನಟ, ನಿರ್ದೇಶಕ ರಿಷಬ್ ಶೆಟ್ಟಿ ಆಗಮಿಸದೇ ಇದ್ದುದು ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ರಾಕೇಶ್ ಅಂತಿಮ ದರ್ಶನ ಪಡೆಯಲು ರಿಷಬ್ ಬಂದಿಲ್ಲ ಎಂದು ನೆಟ್ಟಿಗರು ಕಿಡಿ ಕಾರಿದ್ದರು.
ಅದಾಗ್ಯೂ ರಾಕೇಶ್ ಪೂಜಾರಿ ಸಾವಿಗೆ ಸಂತಾಪ ಸೂಚಿಸಿ ಮೇ 12ರಂದು ರಿಷಬ್ ಶೆಟ್ಟಿ ಪೋಸ್ಟ್ ಹಂಚಿಕೊಂಡಿದ್ದರು. ʼʼನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗು ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ… ಮತ್ತೆ ಹುಟ್ಟಿ ಬಾ ಗೆಳೆಯ… ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿʼʼ ಎಂದು ಬರೆದುಕೊಂಡಿದ್ದರು. ರಿಷಬ್ ಇದೀಗ ರಾಕೇಶ್ ಮನೆಗೆ ಭೇಟಿ ನೀಡಿದ್ದಾರೆ.
[ad_2]
Source link