
*ಧಾರವಾಡ ಜೂನ್ 19:* ಧಾರವಾಡ ಜಿಲ್ಲೆಯಾದ್ಯಂತ 5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರದಿಂದ ನಿರ್ಜಲೀಕರಣ ಉಂಟಾಗಿ ಮಗುವಿಗೆ ಮಾರಣಾಂತಿಕವಾಗುವುದನ್ನು ತಡೆಗಟ್ಟಲು, ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನ-2025 ವನ್ನು ಜೂನ್ 16, 2025 ರಿಂದ ಜುಲೈ 31, 2025 ವರೆಗೆ ಹಮ್ಮಿಕೊಳ್ಳಲಾಗಿದೆ. ಇಂದು (ಜೂ.19) ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಉದ್ಘಾಟಿಸಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಮಕ್ಕಳಲ್ಲಿ ಅತಿಸಾರದಿಂದ ನಿರ್ಜಲೀಕರಣ ಉಂಟಾಗಿ ಮಗುವಿಗೆ ಮಾರಣಾಂತಿಕವಾಗಬಹುದು. ಇದನ್ನು ಸರಿಯಾದ ಪ್ರಮಾಣದಲ್ಲಿ ORS–ZINC ಮಾತ್ರೆಯನ್ನು ನೀಡುವುದರ ಮೂಲಕ ತಡೆಗಟ್ಟಬಹುದು. ಮತ್ತು ತೀವ್ರತರ ಅತಿಸಾರದಿಂದ ಮಕ್ಕಳ ಮರಣವನ್ನು ಶೂನ್ಯಕ್ಕೆ ತರುವುದು ಈ ಅಭಿಯಾನದ ಉದ್ದೇಶವಾಗಿರುತ್ತದೆ ಎಂದು ತಿಳಿಸಿದರು. ಮಗುವಿಗೆ ಅತಿಸಾರ ಉಂಟಾದಾಗ ORS ಮತ್ತು ZINC ನೀಡುವುದರ ಮೂಲಕ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಬಹುದು.

ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಉಚಿತ ಚಿಕಿತ್ಸೆ ಪಡೆದುಕೊಳ್ಳಲು ತಿಳಿಸಿದರು. ಜೂನ್ 16, 2025 ರಿಂದ ಜುಲೈ 31, 2025 ರವರೆಗೆ ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನ – 2025 ಯನ್ನು ಎಲ್ಲ ಆರೋಗ್ಯ ಕೇಂದ್ರಗಳಲ್ಲೂ, ಉಪಕೇಂದ್ರಗಳಲ್ಲೂ ಹಾಗೂ ಆಸ್ಪತ್ರೆಗಳಲ್ಲಿ ಹಮ್ಮಿಕೊಂಡಿದ್ದು, ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಈ ಕುರಿತಂತೆ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಮಕ್ಕಳು ಅತಿಸಾರಕ್ಕೆ ಒಳಗಾದಾಗ ತಾಯಂದಿರು ವಿಶೇಷ ಕಾಳಜಿ ವಹಿಸಬೇಕು ಹಾಗೂ ಎದೆಹಾಲನ್ನು ಉಣಿಸುವುದುನ್ನು ನಿಲ್ಲಿಸಬಾರದು, ಎದೆಹಾಲನ್ನು ಉಣಿಸುವುದುನ್ನು ನಿಲ್ಲಿಸಿದಲ್ಲಿ ಮಗುವಿಗೆ ನಿರ್ಜಲೀಕರಣ ಉಂಟಾಗಬಹುದು ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಮ್ ಹೊನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 5 ವರ್ಷದ ಒಳಗಿನ ಮಕ್ಕಳ ಸಂಖ್ಯೆ 207837 ಇದ್ದು, ಈ ಮಕ್ಕಳಲ್ಲಿ ಅತಿಸಾರ ಉಂಟಾಗದಂತೆ ಜಾಗೃತಿ ಮೂಡಿಸಲು ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನ-2025 ಹಮ್ಮಿಕೊಂಡಿದ್ದು,
ಶುಚಿತ್ವವನ್ನು ಕಾಪಾಡಿಕೊಳ್ಳುವುದರ ಮೂಲಕ, ಸ್ವಚ್ಚವಾಗಿ ಕೈತೊಳೆಯುದರ ಮೂಲಕ, ಅಹಾರ ತಯಾರಿಸುವಾಗ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದರ ಮೂಲಕ ಮಕ್ಕಳಲ್ಲಿ ಅತಿಸಾರ ಉಂಟಾಗದಂತೆ ನೋಡಿಕೊಳ್ಳಬಹುದು ಎಂದು ಹೇಳಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪಾ ಗಾಬಿ ಅವರು ಮಾತನಾಡಿ, ಪಾಲಕರು ಮಕ್ಕಳನ್ನು ಬೇಗನೆ ಆಸ್ಪತ್ರೆಗೆ ಕರೆದುಕೊಂಡು ಬಂದು ಸೂಕ್ತ ಚಿಕಿತ್ಸೆಯನ್ನು ಪಡೆಯುದರಿಂದ ಮಗುವಿಗೆ ಪ್ರಾಣಾಪಾಯವಾಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞರಾದ ಡಾ. ಟಿ.ಎ. ಶೇಪೂರ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ಮೌರ್ಯ ಹಾಗೂ ಡಾ. ಮೇಘಾ ಅವರು ಅತಿಸಾರ ಹಾಗೂ ಅತಿಸಾರ ತಡೆಗಟ್ಟುವುದು ಹಾಗೂ ಅಪಾಯಕಾರಿ ಚಿಹ್ನೆಗಳ ಮತ್ತು ತಾಯಂದಿರು ಮಗುವಿನಲ್ಲಿ ನಿರ್ಜಲೀಕರಣ ಆಗದಂತೆ ವಹಿಸಬೇಕಾದ ಕಾಳಜಿಯ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಸುಜಾತಾ ಹಸವೀಮಠ ಅವರು ವಂದಿಸಿದರು. ರೇಣುಕಾ ಮಲ್ಲನಗೌಡರ್ ಅವರು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಪ್ರೇಬೇಷನರಿ ಐ.ಎ.ಎಸ್ ಅಧಿಕಾರಿ ರೀತಿಕಾ ವರ್ಮಾ, ಧಾರವಾಡ ತಾಲೂಕಾ ಆರೋಗ್ಯಾಧಿಕಾರಿ ಡಾ. ತನುಜಾ ಕೆ.ಎನ್ ಹಾಗೂ ಸಿ.ಸಿ.ಟಿ ವೈದ್ಯಾಧಿಕಾರಿ ಡಾ. ಗೌರಿ ಬೆಲ್ಲದ, ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರು, ಸಿಬ್ಬಂದಿಯವರು ಹಾಗೂ ಪ್ಯಾರಾ ಮಡಿಕಲ್ ವಿದ್ಯಾರ್ಥಿಗಳು, ತಾಯಂದಿರು, ಸಾರ್ವಜನಿಕರು ಉಪಸ್ಥಿತರಿದ್ದರು.