ಬೆಂಗಳೂರು: ವಿಕಸಿತ ಭಾರತದ ಗುರಿಯೊಂದಿಗೆ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರ ವೈದ್ಯಕೀಯ-ಆರೋಗ್ಯ ಕ್ಷೇತ್ರಕ್ಕೆ ಪ್ರಮುಖ ಆದ್ಯತೆ ನೀಡುತ್ತಿದ್ದು, ಮೊನ್ನೆಯಷ್ಟೇ ಸಂಶೋಧನೆಗಾಗಿ ರೂ. 1 ಲಕ್ಷ ಕೋಟಿ ವಿನಿಯೋಗಿಸಲು ಅನುಮತಿ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು. ಬೆಂಗಳೂರಿನಲ್ಲಿ ಶುಕ್ರವಾರ ʼಜಾಯಿಂಟ್ ಕಮಿಷನ್ ಇಂಟರ್ನ್ಯಾಷನಲ್ (JCI)ʼ ಮಾನ್ಯತೆ ಪಡೆದ ರಾಮಯ್ಯ ಸ್ಮಾರಕ ಆಸ್ಪತ್ರೆಗೆ ಸಂಭ್ರಮೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಸಂಶೋಧನೆ ಕ್ಷೇತ್ರದಲ್ಲಿ ಖಾಸಗಿಯವರ ಸಹಭಾಗಿತ್ವಕ್ಕೂ ಸರ್ಕಾರ ಮುಂದಾಗಿದ್ದು, ಪ್ರಮುಖ ಸಂಸ್ಥೆ, ಕೈಗಾರಿಕೆಗಳನ್ನೂ ಒಳಗೊಂಡಂತೆ ಸಂಶೋಧನೆ, ಅಭಿವೃದ್ಧಿಗೆ ಮುಂದಾಗಿದೆ ಎಂದರು.
ಭಾರತ ಇಂದು ಶಿಕ್ಷಣ, ಸಂಶೋಧನೆ, ವೈದ್ಯಕೀಯ, ಉದ್ಯಮ, ಅಭಿವೃದ್ಧಿ, ಸೇವೆ ಹೀಗೆ ಸರ್ವತಃ ಅತ್ಯುತ್ತಮ ಬೆಳೆವಣಿಗೆ ಹೊಂದುತ್ತಿದೆ. ಹೀಗಾಗಿ ಹೂಡಿಕೆದಾರರಿಗೆ ಭಾರತ ಉತ್ತಮ ಅವಕಾಶಿತ ದೇಶವಾಗಿ ಕಾಣುತ್ತಿದೆ. ಉತ್ಪಾದನಾ ಹಬ್ ಆಗಿ ರೂಪುಗೊಳ್ಳುತ್ತಿದೆ ಎಂದು ಹೇಳಿದರು. ಕಳೆದ ಆರೇಳು ವರ್ಷಗಳಿಂದ ಭಾರತ ಮೆಡಿಕಲ್ ಕೇತ್ರದಲ್ಲೂ ಅಮೂಲಾಗ್ರ ಬದಲಾವಣೆ ಕಾಣುತ್ತಿದೆ. 200-300 ಇದ್ದಂತಹ ಪೇಟೆಂಟ್ಗಳ ಸಂಖ್ಯೆ ಈಗ 1 ಲಕ್ಷ ದಾಟಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ ಮತ್ತು ವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕಗೊಂಡಿದೆ ಎಂದರು.
ಮೆಡಿಕಲ್ ಹಬ್ ಆಗುತ್ತಿದೆ ಭಾರತ
ಬೆಂಗಳೂರು ಸೇರಿದಂತೆ ಭಾರತ ಇಂದು ಜಗತ್ತಿನಲ್ಲೇ ಮೆಡಿಕಲ್ ಹಬ್ ಆಗಿ ಪರಿವರ್ತನೆ ಹೊಂದುತ್ತಿದೆ. ಗುಣಮಟ್ಟದ ಚಿಕಿತ್ಸೆ ಸಿಗುತ್ತದೆಂಬ ನಂಬಿಕೆಯಿಂದ ಜಗತ್ತಿನೆಲ್ಲೆಡೆಯಿಂದ ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೆಲಸ ಮಾಡುವ ಜನರ ಕೊರತೆ ತೀವ್ರವಾಗಿದೆ. ಹಾಗಾಗಿ ಹೂಡಿಕೆದಾರರು ಭಾರತದತ್ತ ಧಾವಿಸುತ್ತಿದ್ದಾರೆ. ದೇಶಿಯ ಯುವ ಸಮುದಾಯದಲ್ಲಿ ವಿದ್ಯಾರ್ಹತೆ ಜತೆಗೆ ಕೌಶಲ್ಯ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಗುಣಮಟ್ಟ ಅಡಕವಾಗಿದ್ದರಿಂದ ಉದ್ಯೋಗಾವಕಾಶವನ್ನೂ ಕಲ್ಪಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದರು.
ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಹೂಡಿಕೆದಾರರ ಸಂಖ್ಯೆ ಹೆಚ್ಚುತ್ತಿದೆ. 2025ರ ಏಪ್ರಿಲ್-ಮೇ, ಜೂನ್ ತಿಂಗಳಲ್ಲೇ ಒಟ್ಟಾರೆ US$ 35 ಬಿಲಿಯನ್ ಹೂಡಿಕೆ ಬಂದಿದೆ. ಮೊಬೈಲ್ ಆಮದು ಮಾಡಿಕೊಳ್ಳುತ್ತಿದ್ದ ಭಾರತವೀಗ ಶೇ.80ರಷ್ಟು ಮೊಬೈಲ್ ರಫ್ತು ಮಾಡುತ್ತಿದೆ. ಉತ್ಪಾದನಾ ಹಬ್ ಆಗುತ್ತಿದೆ. ಮುಂದಿನ ದಿನಗಳಲ್ಲಿ ಮೆಡಿಕಲ್ ಹಬ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್ ವೇಳೆ ದೊಡ್ಡ ಅನುಭವ ಭಾರತಕ್ಕಾಗಿದೆ. ಜಗತ್ತಿಗೇ ಅಗತ್ಯ ಔಷಧ ಪೂರೈಸುವ ಸಾಮರ್ಥ್ಯ ಭಾರತಕ್ಕಿದೆ ಎಂಬುದು ದೃಢವಾಗಿದ್ದು, ಹೆಮ್ಮೆ ತಂದಿದೆ. ಕೋವಿಡ್ ನಂತರ ಒಂದು ವರ್ಷದ ಬಳಿಕವೂ ವಿದೇಶಗಳು ಸುಧಾರಣೆ ಕಾಣಲಿಲ್ಲ, ಆದರೆ ಭಾರತ ವೇಗದಲ್ಲಿ ಬೆಳವಣಿಗೆ ಕಂಡಿತು ಎಂದು ಹೇಳಿದರು.
ಬೆಂಗಳೂರಿನ ಎಂ.ಎಸ್. ರಾಮಯ್ಯ ಸ್ಮಾರಕ ಆಸ್ಪತ್ರೆಗೆ ಅಮೆರಿಕದ ಚಿಕಾಗೋದಲ್ಲಿರುವ ʼಜಾಯಿಂಟ್ ಕಮಿಷನ್ ಇಂಟರ್ನ್ಯಾಷನಲ್ (JCI)’ ಮಾನ್ಯತೆ ನೀಡಿರುವುದು ಹೆಮ್ಮೆ ತರಿಸಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ತೋರುವ ಜತೆಗೆ ಆಧುನಿಕ ಯುಗಕ್ಕೆ ಅಗತ್ಯ ಶಿಕ್ಷಣದ ಜತೆಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುತ್ತಿದೆ. ಮುಂದಿನ ವರ್ಷಗಳಲ್ಲಿ ಜಗತ್ತಿನ 100 ಮೆಡಿಕಲ್ ಆಸ್ಪತ್ರೆಗಳಲ್ಲಿ ಇದೂ ಒಂದಾಗಲಿ ಎಂದು ಸಚಿವ ಜೋಶಿ ಆಶಿಸಿದರು.
ಹತ್ತು ವರ್ಷದಲ್ಲಿ ಅಂದರೆ, 2036ರ ವೇಳೆಗೆ ಭಾರತ ಸಮ್ಮರ್ ಒಲಿಂಪಿಕ್ಸ್ಗೆ ಸೇರ್ಪಡೆಗೊಳ್ಳುವ ಆಲೋಚನೆಯಲ್ಲಿದ್ದು, ಇದಕ್ಕಾಗಿ ಸರ್ಕಾರ ಹೆಚ್ಚುವರಿ ಅನುದಾನ ಸಹ ಕೊಡುತ್ತಿದೆ. ಸಮ್ಮರ್ ಒಲಿಂಪಿಕ್ಸ್ನಲ್ಲಿ ಭಾಗಿಯಾಗಲು ಕನಿಷ್ಠ ಒಬ್ಬೊಬ್ಬ ಯುವಕ-ಯುವತಿ ಕ್ರೀಡಾಪಟುಗಳನ್ನು ಶಿಕ್ಷಣ ಸಂಸ್ಥೆಗಳು ತಯಾರು ಮಾಡಬೇಕು. ಒಳ್ಳೇ ಎಂಜಿನಿಯರ್ಸ್, ಡಾಕ್ಟರ್ಸ್ ಜತೆಗೆ ಒಳ್ಳೇ ಒಲಿಂಪಿಕ್ಸ್ ಕ್ರೀಡಾಪಟುಗಳ ಕೊಡುಗೆ ಸಹ ನೀಡಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಗೋಕುಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಎಂ.ಆರ್. ಸೀತಾರಾಮ, ಡಾ.ಎಂ.ಆರ್. ಜಯರಾಮ್ ಸೇರಿದಂತೆ ಅನೇಕ ಗಣ್ಯರು, ವೈದ್ಯರು, ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಆಡಳಿತ ಮಂಡಳಿ ಸದಸ್ಯರು ಹಾಗೂ ವೈದ್ಯ-ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸುದ್ದಿಯನ್ನೂ ಓದಿ | Pralhad Joshi: ಆರೆಸ್ಸೆಸ್ ಬ್ಯಾನ್, ಕಾಂಗ್ರೆಸ್ಗೆ ಅಧಿಕಾರ ಎಲ್ಲಾ ಹಗಲುಗನಸು ಎಂದ ಪ್ರಲ್ಹಾದ್ ಜೋಶಿ