[ad_1]
ಕಲಬುರಗಿ:
ಕಳೆದ ವರ್ಷ ಇಡೀ ರಾಜ್ಯದಾದ್ಯಂತ ಸದ್ದು ಮಾಡಿದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೋಲುವಂತ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದ್ದು, ಹೆಣ್ಣಿನ ಮಾತು ಕೇಳಿ ವ್ಯಕ್ತಿಯೊಬ್ಬನನ್ನು ಅಪಹರಿಸಿ, ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಬುರಗಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ನಾಯಕ್ (39) ಎಂಬಾತನನ್ನು ಗುರುರಾಜ್ ನೆಲೋಗಿ ಹಾಗೂ ಲಕ್ಷ್ಮಿಕಾಂತ್ ಮಾಲಿ ಪಾಟೀಲ್ ಅಪಹರಿಸಿ, ಹಲ್ಲೆ ನಡೆಸಿದ್ದರು. ಈ ವೇಳೆ ಖಾಸಗಿ ಅಂಗಕ್ಕೆ ಒದ್ದು ಕೊಲೆ ಮಾಡಿದ್ದರು. ಬಳಿಕ ಶವವನ್ನು ಶಹಾಬಾದ್ ಮೂಲಕ ರಾಯಚೂರು ಬಳಿಯ ಶಕ್ತಿ ನಗರದ ಕೃಷ್ಣ ನದಿಯಲ್ಲಿ ಎಸೆದಿದ್ದರು. ಈ ಪ್ರಕರಣ ಭೇದಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ಸುದ್ದಿಗೋಷ್ಠಿಯ್ಲಿ ಸೋಮವಾರ ಮಾಹಿತಿ ನೀಡಿದರು.
ಮೂಲತಃ ಕಾರವಾರದವನಾಗಿದ್ದ ರಾಘವೇಂದ್ರ ನಾಯಕ್ 15 ದಿನಗಳಿಗೊಮ್ಮೆ ತನ್ನೂರಿಗೆ ಹೋಗಿ ಬರುತ್ತಿದ್ದ, ಎರಡು ತಿಂಗಳು ಕಳೆದರು ಮನೆಗೆ ಬಾರದೇ ಇರುವುದನ್ನು ಕಂಡ ಆತನ ಪತ್ನಿ ಸುರೇಖಾ ಕಳೆದ ಮೇ 25ರಂದು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಅಪಹರಣ ಪ್ರಕರಣ ಬೆನ್ನಹತ್ತಿದ ಪೊಲೀಸರಿಗೆ ತನಿಖೆಯಿಂದ ಕೊಲೆಯಾಗಿರುವ ಘಟನೆ ಬಯಲಾಗಿದ್ದು, ಗುರುರಾಜ್ ನೆಲೋಗಿ (36), ಅಶ್ವಿನಿ ಅಲಿಯಾಸ್ ತನು (26), ಲಕ್ಷ್ಮಿಕಾಂತ್ ಮಾಲಿ ಪಾಟೀಲ್ (28) ಎನ್ನುವ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಉಪ ಪೊಲೀಸ್ ಆಯುಕ್ತರಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ್ ಅವರ ನೇತೃತ್ವದಲ್ಲಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಕೀಲ್ ಅಹಮದ್ ಅಂಗಡಿ, ಪಿಎಸ್ಐಗಳಾದ ಇಂದಿರವ್ವ, ಶಿವಶರಣಪ್ಪ ಕೋರಳ್ಳಿ ಹಾಗೂ ಸಿಬ್ಬಂದಿ ಪ್ರಹ್ಲಾದ್ ಕುಲಕರ್ಣಿ, ಪ್ರಭಾಕರ್ ಜ್ಯೋತಿ, ಯಲ್ಲಪ್ಪ, ಮೊಸಿನ್, ಸಂಗಣ್ಣ, ಮಲ್ಲಣ್ಣ ಹಾಗೂ ಶಿವಲಿಂಗಪ್ಪ ಅವರನ್ನೊಳಗೊಂಡ ತಂಡವು ಪ್ರಕರಣ ಭೇದಿಸಿ, ಆರೋಪಿಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ಅಭಿನಂದಿಸಿದರು.
[ad_2]
Source link