[ad_1]
ಮಂಗಳೂರು: ನಗರದಲ್ಲಿ ಮೂರು ಕಡೆ ಗುರುವಾರ ಮತ್ತು ಶುಕ್ರವಾರ ನಡೆದ ಚೂರಿ ಇರಿತ ಹಾಗೂ ಹಲ್ಲೆ ಪ್ರಕರಣ ಸಂಬಂಧ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ. ನಗರದ ಹೊರವಲಯದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಕಣ್ಣೂರಿನಲ್ಲಿ ಶುಕ್ರವಾರ ನಸುಕಿನಲ್ಲಿ ನೌಷಾದ್ ಅಹ್ಮದ್ (39) ಎಂಬಾತನಿಗೆ ಚೂರಿ ಇರಿದ ಪ್ರಕರಣ ಸಂಬಂಧ ಮುಡಿಪುವಿನ ಲೋಹಿತಾಶ್ವ (32), ವೀರನಗರದ ಪುನೀತ್ (28), ಕುತ್ತಾರಿನ ಗಣೇಶ ಪ್ರಸಾದ್(23) ನನ್ನು ಬಂಧಿಸಲಾಗಿದೆ.
ಕಣ್ಣೂರು ಬಸ್ ನಿಲ್ದಾಣದ ಬಳಿ ನಿಂತಿದ್ದ ನೌಷಾದ್ ಅಹ್ಮದ್ ಅವರ ಬಳಿ ‘ಮಂಗಳೂರಿಗೆ ಬಸ್ ಇದೆಯಾ’ ಎಂದು ವಿಚಾರಿಸುವ ನೆಪದಲ್ಲಿ ಆರೋಪಿಗಳು ಬೆನ್ನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು. ಇವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಅದೇ ರೀತಿ ಅಲೇಕಳ ನಿವಾಸಿ ಫೈಝಲ್ (40) ಎಂಬುವರಿಗೆ ಉಳ್ಳಾಲ ಠಾಣೆ ವ್ಯಾಪ್ತಿಯ ತೊಕ್ಕೊಟ್ಟಿನಲ್ಲಿ ಗುರುವಾರ ತಡರಾತ್ರಿ ಚೂರಿ ಇರಿದದ್ದು ನಾವೇ ಎಂದು ಇದೇ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದರು.
ಇನ್ನು ಕಾವೂರು ಠಾಣಾ ವ್ಯಾಪ್ತಿಯ ದೇರೇಬೈಲ್ ಕೊಂಚಾಡಿ ಬಳಿ ಮೀನುಮಾರುವ ಮಹಮ್ಮದ್ ಲುಕ್ಕಾನ್ ಅವರ ಮೇಲೆ ಶುಕ್ರವಾರ ನಸುಕಿನಲ್ಲಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಜಪೆ ಬಳಿಯ ಕಳವಾರು ಕುರ್ಸುಗುಡ್ಡೆಯ ಲಿಖಿತ್ ಪೂಜಾರಿ (29), ಕುತ್ತಾರು ಸುಭಾಷ್ ನಗರದ ರಾಕೇಶ್ (34), ಸುರತ್ಕಲ್ ಎಂಎಸ್ಇಜೆಡ್ ನವಗ್ರಾಮ ಆಶ್ರಯ ಕಾಲೊನಿಯ ಧನರಾಜ್ ಅಲಿಯಾಸ್ ಧನು (24) ಹಾಗೂ ಪ್ರಸ್ತುತ ಮೂಡುಬಿದಿರೆ ಬನ್ನಡ್ಕದಲ್ಲಿ ವಾಸವಿರುವ ಬೆಳ್ತಂಗಡಿ ತಾಲ್ಲೂಕಿನ ಹೊಸಂಗಡಿ ಗ್ರಾಮದ ಅಂಗರಕೆರೆ ನಿವಾಸಿ ಪ್ರಶಾಂತ್ ಶೆಟ್ಟಿ (26) ಬಂಧಿತ ಆರೋಪಿಗಳು ಎಂದು ಕಮಿಷನರ್ ತಿಳಿಸಿದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಎಲ್ಲ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಕಮಿಷನರ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Murder Case: ಮಂಗಳೂರು ಬೆನ್ನಲ್ಲೇ ಗೋಕಾಕ್ನಲ್ಲಿ ಯುವಕನ ಭೀಕರ ಹತ್ಯೆ
5 ಬಸ್ಗಳಿಗೆ ಕಲ್ಲೆಸೆತ; ನಾಲ್ವರ ಬಂಧನ
ಮಂಗಳೂರಿನ ನಗರ ಪೂರ್ವ ಪೊಲೀಸ್ ಠಾಣೆಯ ವ್ಯಾಪ್ತಿಯ ಪಂಪ್ವೆಲ್ನಲ್ಲಿ ಕೆಎಸ್ಆರ್ಟಿಸಿಯ ಐದು ಬಸ್ಗಳಿಗೆ ಕಲ್ಲೆಸೆದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಬಾಬುಗುಡ್ಡೆಯ ಬಾಲಚಂದ್ರ (31), ಅಕ್ಷಯ್ (21), ಜಪ್ಪಿನಮೊಗರಿನ ಶಬೀನ್ ಪಡಿಕ್ಕಲ್ (38), ಮಂಜನಾಡಿಯ ರಾಕೇಶ್ ಎಂ (26) ಬಂಧಿತರು. ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆಂದು ಪೊಲೀಸ್ ಕಮಿಷನರ್ ತಿಳಿಸಿದರು.
[ad_2]
Source link