[ad_1]
ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ (IND vs ENG) ಇಂಗ್ಲೆಂಡ್ ವಿರುದ್ದ ಭಾರತ ತಂಡ 7 ವಿಕೆಟ್ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ 5 ಪಂದ್ಯಗಳ ಟಿ20ಐ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಪಡೆದಿದೆ. ಅಂದ ಹಾಗೆ ಈ ಪಂದ್ಯದಲ್ಲಿ ಭಾರತ ತಂಡದ ಆಲ್ರೌಂಡರ್ ನಿತೀಶ್ ರೆಡ್ಡಿ ಫೀಲ್ಡಿಂಗ್ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅವರ ಸ್ಟನಿಂಗ್ ಕ್ಯಾಚ್ ಅನ್ನು ಪಡೆದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬುಧವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಇಂಗ್ಲೆಂಡ್ ತಂಡದ ಪರ ಏಕಾಂಗಿ ಹೋರಾಟ ನಡೆಸಿದ್ದ ನಾಯಕ ಜೋಸ್ ಬಟ್ಲರ್ ಅರ್ಧಶತಕ ಸಿಡಿಸಿದ್ದರು. ಒಂದು ತುದಿಯಲ್ಲಿ ನಿರಂತರವಾಗಿ ವಿಕೆಟ್ ಉರುಳುತ್ತಿದ್ದರೂ ಮತ್ತೊಂದು ಸ್ಪೋಟಕ ಬ್ಯಾಟ್ ಮಾಡಿದ್ದ ಬಟ್ಲರ್, 44 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 68 ರನ್ಗಳನ್ನು ಕಲೆ ಹಾಕಿದರು. ಆ ಮೂಲಕ ಇಂಗ್ಲೆಂಡ್ ತಂಡವನ್ನು 100ರ ಗಡಿ ದಾಟಿಸಿದ್ದರು.
ವರುಣ್ ಸ್ಪಿನ್ ಮೋಡಿಗೆ ಇಂಗ್ಲೆಂಡ್ ತತ್ತರ, ಅಭಿಷೇಕ್ ಅಬ್ಬರದಿಂದ ಭಾರತಕ್ಕೆ ಮೊದಲ ಜಯ!
ಸ್ಟನಿಂಗ್ ಕ್ಯಾಚ್ ಪಡೆದ ನಿತೀಶ್ ರೆಡ್ಡಿ
ವರುಣ್ ಚಕ್ರವರ್ತಿ ಅವರು 17ನೇ ಓವರ್ನ ಎರಡನೇ ಎಸೆತವನ್ನು ಲೆಗ್ ಸ್ಟಂಪ್ ಮೇಲೆ ಸ್ವಲ್ಪ ಶಾರ್ಟ್ ಎಸೆದಿದ್ದರು. ಇದನ್ನು ಸದುಪಯೋಗಪಡಿಸಿಕೊಂಡು ಜೋಸ್ ಬಟ್ಲರ್ ಸ್ಕೈರ್ ಲೆಗ್ ಮೇಲೆ ಸಿಕ್ಸರ್ಗೆ ಹೊಡೆಯಲು ಪ್ರಯತ್ನಿಸಿದರು. ಆದರೆ, ಚೆಂಡು ಫ್ಲ್ಯಾಟ್ ಆಗಿ ಬೌಂಡರಿ ಲೈನ್ ಬಳಿ ಹೋಗುತ್ತಿತ್ತು. ಈ ವೇಳೆ ಬೌಂಡರಿ ಲೈನ್ನಿಂದ ಓಡಿ ಬಂದ ನಿತೀಶ್ ರೆಡ್ಡಿ ಚಿರತೆಯಂತೆ ಹಾರಿ ಸ್ಟನಿಂಗ್ ಕ್ಯಾಚ್ ಪಡೆಯುವಲ್ಲಿ ಸಫಲರಾದರು. ಇದನ್ನು ಗಮನಿಸಿದ ಆಟಗಾರರು ಸೇರಿದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಫ್ಯಾನ್ಸ್ ನಿತೀಶ್ ರೆಡ್ಡಿ ಫೀಲ್ಡಿಂಗ್ ಕೌಶಲವನ್ನು ಕೊಂಡಾಡಿದ್ದಾರೆ.
ಇಂಗ್ಲೆಂಡ್ ಬ್ಯಾಟಿಂಗ್ ವೈಫಲ್ಯ
ಜೋಸ್ ಬಟ್ಲರ್ ವಿಕೆಟ್ ಒಪ್ಪಿಸಿದ ಬಳಿಕ ಇಂಗ್ಲೆಂಡ್ ತಂಡದ ದೊಡ್ಡ ಮೊತ್ತದ ಕನಸು ಭಗ್ನವಾಯಿತು. ತನ್ನೆಲ್ಲಾ 20 ಓವರ್ಗಳನ್ನು ಪೂರ್ಣಗೊಳಿಸಿದರೂ ಇಂಗ್ಲೆಂಡ್ ತಂಡ 132 ರನ್ಗಳಿಗೆ ಆಲ್ಔಟ್ ಆಯಿತು. ಆ ಮೂಲಕ ಆತಿಥೇಯ ಭಾರತ ತಂಡಕ್ಕೆ 133 ರನ್ಗಳ ಸಾಧಾರಣ ಗುರಿಯನ್ನು ನೀಡಿತ್ತು. ಜೋಸ್ ಬಟ್ಲರ್ ಬಿಟ್ಟರೆ ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ 17 ಮತ್ತು ಜೋಫ್ರಾ ಆರ್ಚರ್ 12 ರನ್ ಗಳಿಸಿದರು. ಇನ್ನುಳಿದವರು ವೈಯಕ್ತಿಕ ಎರಡಂಕಿ ಮೊತ್ತವನ್ನು ಗಳಿಸಲು ಸಾಧ್ಯವಾಗಲಿಲ್ಲ.
ಭಾರತಕ್ಕೆ 7 ವಿಕೆಟ್ ಸುಲಭ ಜಯ
ಬಳಿಕ ಇಂಗ್ಲೆಂಡ್ ನೀಡಿದ್ದ 133 ರನ್ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಅಭಿಷೇಕ್ ಶರ್ಮಾ (79 ರನ್) ಸ್ಪೋಟಕ ಅರ್ಧಶತಕದ ಬಲದಿಂದ 12.5 ಓವರ್ಗಳಿಗೆ ಗೆಲುವಿನ ದಡ ಸೇರಿತು. ಸಂಜು ಸ್ಯಾಮ್ಸನ್ (26) ಎರಡನೇ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಟಿ20ಐ ಸರಣಿಯಲ್ಲಿ ಶುಭಾರಂಭ ಕಂಡಿದೆ.
[ad_2]
Source link