[ad_1]
ತಿರುವನಂತಪುರಂ:
ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲ್ಪಟ್ಟ ಹರಿಯಾಣದ ಸಿರ್ಸಾದ ಪ್ರಯಾಣ ವ್ಲಾಗರ್ ಜ್ಯೋತಿ ಮಲ್ಹೋತ್ರಾ, ಪ್ರವಾಸೋದ್ಯಮವನ್ನು ಉತ್ತೇಜಿಸುವ ಅಭಿಯಾನದಲ್ಲಿ ಕೇರಳ ಸರ್ಕಾರದ ಅತಿಥಿಯಾಗಿದ್ದಳು ಎಂಬ ಅಂಶ ಎನ್ಐಎ ವಿಚಾರಣೆಯಲ್ಲಿ ತಿಳಿದು ಬಂದಿದೆ. ಜ್ಯೋತಿ ಕೇರಳಕ್ಕೆ ಭೇಟಿ ನೀಡಿ ಕೇರಳ ಸರ್ಕಾರದ ಜೊತೆ ಕೈ ಜೋಡಿಸಿ ಜಾಹೀರಾತು ನಿರ್ಮಿಸಿದ್ದ ಸಂಗತಿ ಬೆಳಕಿಗೆ ಬಂದಿದೆ. ಕೇರಳ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, ಕಳೆದ ಎರಡು ವರ್ಷಗಳಿಂದ ಕೇರಳ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇರಳ ಪ್ರವಾಸೋದ್ಯಮ ಸಚಿವರು ತೊಡಗಿಸಿದ್ದ ಸಾಮಾಜಿಕ ಮಾಧ್ಯಮದ 41 ಇನ್ಫ್ಲುಯೆನ್ಸರ್ಗಳ ಪೈಕಿ ಜ್ಯೋತಿ ಕೂಡ ಒಬ್ಬಳಾಗಿದ್ದಳು.
ರಾಜ್ಯ ಸರ್ಕಾರವು ಇನ್ಫ್ಲುಯೆನ್ಸರ್ಗಳ ಪ್ರಯಾಣ, ವಸತಿ ಮತ್ತು ಆಹಾರದ ವೆಚ್ಚವನ್ನು ಭರಿಸಿತು. ಅವರ ವಾಸ್ತವ್ಯದ ಸಮಯದಲ್ಲಿ ವೀಡಿಯೊಗಳನ್ನು ಚಿತ್ರೀಕರಿಸಲು ಸಹಾಯ ಮಾಡಲು ಖಾಸಗಿ ಏಜೆನ್ಸಿಯನ್ನು ನೇಮಕ ಮಾಡಿತ್ತು. ಈ ಮಾಹಿತಿ ಹೊರ ಬೀಳುತ್ತಿದ್ದಂತೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಈ ಕುರಿತು ಸ್ಪಷ್ಟನೆ ನೀಡಿರುವ ಕೇರಳ ಪ್ರವಾಸೋದ್ಯಮ ಇಲಾಖೆ ಸಚಿವ ಮುಹಮ್ಮದ್ ರಿಯಾಝ್, ಜ್ಯೋತಿ ಮಲ್ಹೋತ್ರಾ ವಿರುದ್ಧ ಗೂಢಚಾರಿಕೆಯ ಆರೋಪ ಕೇಳಿ ಬರುವುದಕ್ಕೂ ಮುನ್ನ, ಆಕೆಯನ್ನು ಕೇರಳಕ್ಕೆ ಆಹ್ವಾನಿಸಲಾಗಿತ್ತು. ಈ ಸತ್ಯ ಮೊದಲೇ ಬೆಳಕಿಗೆ ಬಂದಿದ್ದರೆ ನಾವು ಆಹ್ವಾನಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಕೇರಳದಲ್ಲಿದ್ದಾಗ, ಜ್ಯೋತಿ ಮಲ್ಹೋತ್ರಾ ಕೊಚ್ಚಿ, ಕಣ್ಣೂರು, ಕೋಝಿಕ್ಕೋಡ್, ಆಲಪ್ಪುಳ, ಮುನ್ನಾರ್ ಮತ್ತು ತಿರುವನಂತಪುರಂಗೆ ಭೇಟಿ ನೀಡಿದ್ದಳು. ತೆಯ್ಯಂ ಪ್ರದರ್ಶನಗಳ ವ್ಲಾಗ್ಗಳನ್ನು ಚಿತ್ರೀಕರಿಸಿ, ಈ ವ್ಲಾಗ್ಗಳನ್ನು ಯೂಟ್ಯೂಬ್ ಚಾನೆಲ್, ಟ್ರಾವೆಲ್ ವಿತ್ ಜೋ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿತ್ತು. ಗೂಢಚಾರಿಕೆಯ ಆರೋಪದ ಮೇಲೆ ಜ್ಯೋತಿ ಮಲ್ಹೋತ್ರಾ ಬಂಧನಕ್ಕೀಡಾದ ನಂತರ, ಆಕೆ ಕೇರಳಕ್ಕೆ ಭೇಟಿ ನೀಡಿದ್ದ ಬಗೆಗೂ ಕೂಡಾ ಗುಪ್ತಚರ ಸಂಸ್ಥೆಗಳ ಪರಿಶೀಲನೆ ನಡೆಸುತ್ತಿವೆ.
ಪಹಲ್ಗಾಮ್ ದಾಳಿಯ ನಂತರ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿರುವ ವಿಚಾರ ಬಹಿರಂಗವಾಗಿದ್ದು, ಗುಪ್ತಚರ ಅಧಿಕಾರಿಗಳು ಆಕೆಯನ್ನು ಬಂಧಿಸಿದ್ದರು. ಬಂಧನದ ಬಳಿಕ ಆಕೆಯ ವಿಚಾರಣೆ ನಡೆಸಿದಾಗ ಅವಳು ಹಲವು ಪಾಕ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವುದು ತಿಳಿದು ಬಂದಿತ್ತು. ಅಷ್ಟೇ ಅಲ್ಲದೆ ಆಕೆ ಹಲವು ಬಾರಿ ಪಾಕಿಸ್ತಾನಕ್ಕೆ ತೆರಳಿದ್ದಳು ಎನ್ನುವ ಮಾಹಿತಿ ಬಯಲಾಗಿತ್ತು.
[ad_2]
Source link