
ಧಾರವಾಡ: ಚಾಕು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಖದೀಮನ ಕಾಲಿಗೆ ಧಾರವಾಡದ ಪೊಲೀಸರು ಗುಂಡೇಟು ಹಾಕಿ ಬರೋಬ್ಬರಿ ಬಿಸಿ ತಾಕಿಸಿದ್ದಾರೆ.ಗುಂಡೇಟು ತಿಂದ ಆರೋಪಿಯನ್ನು ಖ್ವಾಜಾ ಶಿರಹಟ್ಟಿ ಅಲಿಯಾಸ್ ಮಲಿಕ್ ಎಂದು ಗುರುತಿಸಲಾಗಿದ್ದು, ಆತನನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಇದೇ ವೇಳೆ ಗಾಯಗೊಂಡ ಧಾರವಾಡದ ಉಪನಗರ ಪೊಲೀಸ್ ಇನ್ಸಪೆಕ್ಟರ್ ದಯಾನಂದ ಶೇಗುಣಸಿ ಹಾಗೂ ಹೆಡ್ ಕಾನ್ಸಟೇಬಲ್ ಮುಸ್ತಫಾ ಅವರು ಕೂಡ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಧಾರವಾಡದ ಕಂಠಿಗಲ್ಲಿಯ ರಾಘವೇಂದ್ರ ಗಾಯಕ್ ವಾಡ್ ಎಂಬಾತನ ಕುತ್ತಿಗೆಗೆ ಹಾಗೂ ಬೆನ್ನಿಗೆ ಆರೋಪಿ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮಲಿಕ್ ಎಂಬಾತ ಚಾಕು ಇರಿದಿದ್ದ.ಇತನನ್ನು ವಶಕ್ಕೆ ಪಡೆದ ಉಪನಗರ ಪೊಲೀಸರು ಇನ್ನೊಬ್ಬ ಆರೋಪಿ ಜಟ್ಟು ಇರುವ ಸ್ಥಳ ತೋರಿಸಲು ಆತನನ್ನು ಕರೆದುಕೊಂಡು ಹೋಗಿದ್ದರು.ಆಗ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಪರಿಣಾಮ ಧಾರವಾಡ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಗಾಳಿಯಲ್ಲಿ ಗುಂಡು ಹಾರಿಸಿದರು.