
ಧಾರವಾಡ (ಕರ್ನಾಟಕ ವಾರ್ತೆ) ಜು.14: ಭಾರತೀಯ ಸ್ಟೇಟ್ ಬ್ಯಾಂಕ್ ದೇಶದ ಅತಿ ದೊಡ್ಡ ಸಾಲ ಸೌಲಭ್ಯ ನೀಡುವ ಬ್ಯಾಂಕ್ ಆಗಿದೆ. ವಿವಿಧ ಕಲ್ಯಾಣ ಚಟುವಟಿಕೆಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದೆ. ರೈತ ಸಮುದಾಯದ ಸಮಸ್ಯೆಗಳಿಗೆ ಹಾಗೂ ಅವರ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಕಳೆದ ಜುಲೈ 12, 2025 ರಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳ ಕಾರ್ಯಾಲಯದಲ್ಲಿ, ರೈತರ ಹಿತಾಸಕ್ತಿಗಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದೊಂದಿಗೆ ರೈತಪರ ಕಾರ್ಯಗಳನ್ನು ನಿರ್ವಹಿಸಲು ಒಪ್ಪಂದ ಮಾಡಿಕೊಂಡಿದೆ.
ಈ ಸಂದರ್ಭದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಬೆಂಗಳೂರು ವಲಯದ ಜನರಲ್ ಮ್ಯಾನೇಜರ್ ನೆಟ್ವರ್ಕ್ ಪ್ರಫುಲ್ಲಕುಮಾರ್ ಜೈನ ಮತ್ತು ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಲ್. ಪಾಟೀಲ ಅವರ ಉಪಸ್ಥಿತಿಯಲ್ಲಿ, ಎಸ್ಬಿಐ ಹಬ್ಬಳ್ಳಿಯ ಉಪ ಜನರಲ್ ಮ್ಯಾನೇಜರ್ ಪಿ.ಎಲ್ ಶ್ರೀನಿವಾಸರಾವ್ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣೆ ನಿರ್ದೇಶಕ ಡಾ. ಮಂಜುನಾಥ ಎಂ.ವಿ ಅವರು ಒಪ್ಪಂದ ಪತ್ರಕ್ಕೆ ಸಹಿ ಮಾಡಿದ್ದಾರೆ. ಹುಬ್ಬಳ್ಳಿಯ ಪ್ರಾದೇಶಿಕ ಮ್ಯಾನೇಜರ್ ಸುಮಾ ಜಿ.ಕೆ ಅವರು ಉಪಸ್ಥಿತರಿದ್ದರು.
ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಈ ಒಪ್ಪಂದದಿಂದ ರೈತರಿಗೆ ಉತ್ತಮ ಕೃಷಿ ಪ್ರಯೋಗಳನ್ನು ಉತ್ತೇಜಿಸಲು ಮತ್ತು ರೈತರು, ಕೃಷಿ ಉದ್ಯಮಿಗಳು ಹಾಗೂ ಕೃಷಿ ಪದವೀಧರರು ಮತ್ತು ಕೃಷಿ ಸ್ಟಾರ್ಟ್ಅಪ್ಗಳಿಗೆ ಅಡಚಣೆಯಿಲ್ಲದ ಹಣಕಾಸು ವ್ಯವಸ್ಥೆಯನ್ನು ಪೂರೈಸಲು ಸಹಾಯವಾಗಲಿದೆ. ಒಪ್ಪಂದದ ಉದ್ದೇಶಗಳಂತೆ ವಿವಿಧ ಜಿಲ್ಲೆಗಳಲ್ಲಿ ರೈತರ ಕಾರ್ಯಾಗಾರಗಳನ್ನು ಆಯೋಜಿಸುವುದು, ಹಣಕಾಸು ಸಾಕ್ಷರತಾ ಶಿಬಿರಗಳನ್ನು ನಡೆಸುವುದು, ರೈತರಿಗೆ ಶಿಕ್ಷಣ ನೀಡುವುದು ಮತ್ತು ಉತ್ತಮ ಉತ್ಪಾದನೆಗಾಗಿ ಮಾರುಕಟ್ಟೆ ಮಾಹಿತಿಯನ್ನು ಸುಲಭವಾಗಿ ಪಡೆಯಲು, ಬಳಸಲು ನೆರವಾಗುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.
ಹಣಕಾಸಿನ ಅಡಚಣೆ ಇಲ್ಲದೆ ರೈತರಿಗೆ ಸಾಂಪ್ರದಾಯಿಕ ಮತ್ತು ಆಧುನಿಕ ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಜೊತೆಗೂಡಿ ಬೆಳವಣಿಗೆ ಹೊಂದುತ್ತಿರುವ ಮತ್ತು ಉನ್ನತ ತಂತ್ರಜ್ಞಾನ ಕೃಷಿ ಚಟುವಟಿಕೆಗಳಿಗೆ ಸಹ ಹಣಕಾಸು ಒದಗಿಸುವುದು ಈ ಒಪ್ಪಂದದ ಉದ್ದೇಶವಾಗಿದೆ. ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಸವಾಲುಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಿ, ಯಶಸ್ವಿಗೊಳಿಸಲು ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯ ಈ ಒಪ್ಪಂದಕ್ಕೆ (ಎಂಒಯು) ಸಹಿ ಮಾಡಿವೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.