[ad_1]
ನವದೆಹಲಿ: ಪಾಕಿಸ್ತಾನಕ್ಕೆ ಬೇಹುಗಾರಿಕೆ (Spying for Pakistan) ಮಾಡಿದ ಆರೋಪದ ಮೇಲೆ ಬಂಧಿತರಾದ ಯೂಟ್ಯೂಬರ್ (YouTuber) ಜ್ಯೋತಿ ಮಲ್ಹೋತ್ರಾ (Jyoti Malhotra) ಅವರ ತಂದೆ ಹರೀಶ್ ಮಲ್ಹೋತ್ರಾ (Harish Malhotra), ತಮ್ಮ ಮಗಳು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ತಿಳಿಸಿದ್ದಾರೆ. ಜ್ಯೋತಿಯ ಯೂಟ್ಯೂಬ್ ಚಾನೆಲ್ ‘ಟ್ರಾವೆಲ್ ವಿತ್ ಜೆಓ’ ಅಥವಾ ಇತರ ಸಾಮಾಜಿಕ ಜಾಲತಾಣ(Social Media) ಖಾತೆಗಳ ಬಗ್ಗೆಯೂ ನಮಗೆ ಮಾಹಿತಿ ಇರಲಿಲ್ಲ ಎಂದಿದ್ದಾರೆ.
ಹರಿಯಾಣದ ಹಿಸಾರ್ನ ನಿವಾಸಿಯಾದ 33 ವರ್ಷದ ಜ್ಯೋತಿ, ಸುಮಾರು 4 ಲಕ್ಷ ಸಬ್ಸ್ಕ್ರೈಬರ್ಸ್ ಹೊಂದಿರುವ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ 450ಕ್ಕೂ ಹೆಚ್ಚು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾಳೆ. ಕಳೆದ ವಾರ ಭಾರತೀಯ ಸೇನಾ ಮಾಹಿತಿಯನ್ನು ಪಾಕಿಸ್ತಾನಕ್ಕೆ ಒದಗಿಸಿದ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿದೆ. ಆಕೆ ಪಾಕಿಸ್ತಾನ ಹೈಕಮಿಷನ್ನ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದು, ಕನಿಷ್ಠ ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
“ಆಕೆ ದೆಹಲಿಗೆ ಹೋಗುತ್ತಿದ್ದೇನೆ ಎಂದು ಮಾತ್ರ ಹೇಳುತ್ತಿದ್ದಳು, ಯಾವುದೇ ವಿವರಗಳನ್ನು ತಿಳಿಸಿರಲಿಲ್ಲ,” ಎಂದು ಹರೀಶ್ ಮಲ್ಹೋತ್ರಾ ಹೇಳಿದ್ದಾರೆ. ಆರಂಭದಲ್ಲಿ ಜ್ಯೋತಿ ವಿಡಿಯೋ ಚಿತ್ರೀಕರಣಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ್ದಾಳೆ ಎಂದು ಹೇಳಿದ್ದ ಅವರು, ನಂತರ “ಆಕೆ ಮನೆಯಲ್ಲಿಯೇ ವಿಡಿಯೋಗಳನ್ನು ತಯಾರಿಸುತ್ತಿದ್ದಳು” ಎಂದು ಸ್ಪಷ್ಟಪಡಿಸಿದರು. ಜ್ಯೋತಿಯ ವಿಡಿಯೋಗಳಲ್ಲಿ ‘ಇಂಡಿಯನ್ ಗರ್ಲ್ ಇನ್ ಪಾಕಿಸ್ತಾನ್’, ‘ಇಂಡಿಯನ್ ಗರ್ಲ್ ಎಕ್ಸ್ಪ್ಲೋರಿಂಗ್ ಲಾಹೋರ್’, ‘ಇಂಡಿಯನ್ ಗರ್ಲ್ ಅಟ್ ಕತಾಸ್ ರಾಜ್ ಟೆಂಪಲ್’ ಮತ್ತು ‘ಇಂಡಿಯನ್ ಗರ್ಲ್ ರೈಡ್ಸ್ ಲಕ್ಷುರಿ ಬಸ್ ಇನ್ ಪಾಕಿಸ್ತಾನ್’ ಶೀರ್ಷಿಕೆಯ ಕೆಲವು ವಿಡಿಯೋಗಳನ್ನು ಮಾಡಿದ್ದಾರೆ. ಕೋವಿಡ್-19ಗೂ ಮೊದಲು ಜ್ಯೋತಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಳು, ಆದರೆ ನಂತರ ಉದ್ಯೋಗ ತೊರೆದಿದ್ದಳು ಎಂದು ಆಕೆಯ ತಂದೆ ತಿಳಿಸಿದ್ದಾರೆ.
ಜ್ಯೋತಿ ಮಲ್ಹೋತ್ರಾ ಏಪ್ರಿಲ್ 22ರಂದು 26 ಜನರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಮುಂಚೆ ಕಾಶ್ಮೀರಕ್ಕೆ ಮತ್ತು ಅದಕ್ಕೂ ಮುಂಚೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಭೇಟಿಗಳು ಮತ್ತು ದಾಳಿಯ ನಡುವಿನ ಸಂಬಂಧವನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಹಿಸಾರ್ನ ಪೊಲೀಸ್ ಅಧೀಕ್ಷಕ ಶಶಾಂಕ್ ಕುಮಾರ್ ಸಾವನ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಜ್ಯೋತಿಯನ್ನು ಗೂಢಚಾರಿಕೆಗೆ ಸಂಪನ್ಮೂಲವಾಗಿ ಬಳಸಿಕೊಳ್ಳಲು ತರಬೇತಿಗೊಳಿಸುತ್ತಿದ್ದವು ಎಂದು ಅವರು ಹೇಳಿದ್ದಾರೆ.
ಪಹಲ್ಗಾಮ್ ದಾಳಿಯ ನಂತರ ನಡೆದ ನಾಲ್ಕು ದಿನಗಳ ಭಾರತ-ಪಾಕಿಸ್ತಾನ ಸಂಘರ್ಷದ ಸಂದರ್ಭದಲ್ಲಿ ಜ್ಯೋತಿ, ದೆಹಲಿಯ ಪಾಕಿಸ್ತಾನ ಹೈಕಮಿಷನ್ನ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದಳು ಎಂದು ಆರೋಪಿಸಲಾಗಿದೆ. ಆಕೆ ಪಾಕಿಸ್ತಾನದ ಕೆಲವು ಉನ್ನತ ವ್ಯಕ್ತಿಗಳನ್ನು ಭೇಟಿಯಾಗಿದ್ದಾಳೆ ಎಂದೂ ಸಾವನ್ ತಿಳಿಸಿದ್ದಾರೆ.
ಆಪರೇಷನ್ ಸಿಂದೂರ್
ಪಹಲ್ಗಾಮ್ ದಾಳಿಯ ಬಳಿಕ ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿ ಆಪರೇಷನ್ ಸಿಂಧೂರ್ ಆರಂಭಿಸಿತು. ಪಾಕಿಸ್ತಾನವು ಭಾರೀ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ಪ್ರಾರಂಭಿಸಿತು, ಆದರೆ ಭಾರತವು ಇದನ್ನು ತಡೆಗಟ್ಟಿತು. ಪ್ರತೀಕಾರವಾಗಿ, ಭಾರತೀಯ ಸೇನೆಯು ಪಾಕ್ನ ವಾಯುನೆಲೆಗಳ ಮೇಲೆ ದಾಳಿ ನಡೆಸಿತು. ಮೇ 10 ರಂದು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಲಾಯಿತು.
ಜ್ಯೋತಿ ಮಲ್ಹೋತ್ರಾ ಸೇರಿದಂತೆ ಕನಿಷ್ಠ 12 ಜನರನ್ನು ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಬಂಧನಗಳು ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ನಡೆದಿವೆ.
[ad_2]
Source link