
ಬೆಂಗಳೂರು: ಎಸ್ಸಿಎಸ್ಪಿ/ಟಿಎಸ್ಪಿ ಅನುದಾನವನ್ನು ಪಂಚ ಗ್ಯಾರಂಟಿಗಾಗಿ ಬಳಸುವ ಮೂಲಕ ಪರಿಶಿಷ್ಟರ ಹಣವನ್ನ ದೋಚಲು ರಾಜ್ಯ ಕಾಂಗ್ರೆಸ್ ಸರ್ಕಾರ (Congress) ಮುಂದಾಗಿದೆ ಎಂದು ಆರ್.ಅಶೋಕ್ (R Ashok) ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಹಂಚಿಕೊಂಡಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಶಿಷ್ಟರ 11.8 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ಮುಂದಾಗಿದೆ. ಈ ಮೂಲಕ ಕಾಂಗ್ರೆಸ್ನವರು ಮತ್ತೊಮ್ಮೆ ಪರಿಶಿಷ್ಟ ಸಮುದಾಯಗಳಿಗೆ ದ್ರೋಹ ಬಗೆಯಲು ಹೊರಟಿದ್ದಾರೆ. ಇದು ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು
ಸಿದ್ದರಾಮಯ್ಯನವರೇ, ಅನುದಾನ ಹಂಚಿಕೆ ಮಾಡಲು ಹಣವಿಲ್ಲದ ಮೇಲೆ ಬಜೆಟ್ನಲ್ಲಿ ಸುಮ್ಮನೆ ಕಾಟಾಚಾರಕ್ಕೆ ಘೋಷಣೆ ಮಾಡುತ್ತೀರಾ? ಬಜೆಟ್ನಲ್ಲಿ ಅವಾಸ್ತವಿಕ ಘೋಷಣೆಗಳನ್ನು ಮಾಡಿ, ಪರಿಶಿಷ್ಟರ ಮೂಗಿಗೆ ತುಪ್ಪ ಸವರಿದ್ದೀರಿ. ಈ ಮೂಲಕ ಬಿಟ್ಟಿ ಪ್ರಚಾರ ಪಡೆದುಕೊಂಡರೆ ಪರಿಶಿಷ್ಟ ಸಮುದಾಯಗಳ ಕಲ್ಯಾಣ ಆಗುತ್ತಾ? ಇದೇನಾ ತಮಗೆ ಪರಿಶಿಷ್ಟ ಸಮುದಾಯಗಳ ಬಗ್ಗೆ ಇರುವ ಬದ್ಧತೆ? ಇದೇನಾ ತಾವು ಭಾಷಣ ಬಿಗಿಯುವ ಸಾಮಾಜಿಕ ನ್ಯಾಯ? ಎಂದು ವಾಗ್ದಾಳಿ ನಡೆಸಿದರು. ಒಂದು ಕಡೆ ಬಿಡುಗಡೆ ಮಾಡಿರುವ ಅಲ್ಪ ಸ್ವಲ್ಪ ಅನುದಾನವನ್ನು ಭ್ರಷ್ಟಾಚಾರಕ್ಕೆ ಮತ್ತೊಂದು ಕಡೆ ಘೋಷಣೆ ಮಾಡಿದ ಅನುದಾನವನ್ನ ಹಂಚಿಕೆ ಮಾಡದೆ ಬಾಕಿ ಉಳಿಸಿಕೊಳ್ಳುತ್ತೀರಿ. ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು. ತಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಎನ್ನುವುದು ಇದ್ದರೆ ಇನ್ನೆಂದೂ ಅಹಿಂದ ಹೆಸರಿನಲ್ಲಿ ರಾಜಕೀಯ ಮಾಡಬೇಡಿ ಎಂದು ಆಗ್ರಹಿಸಿದರು.

ಪರಿಶಿಷ್ಟರ ಹಣ ಗ್ಯಾರಂಟಿಗೆ ಬಳಕೆ
ಪರಿಶಿಷ್ಟ ಜಾತಿ ಉಪಯೋಜನೆ (ಎಸ್ಸಿಎಸ್ಪಿ) ಮತ್ತು ಟಿಎಸ್ಪಿ (ಬುಡಕಟ್ಟು ಉಪಯೋಜನೆ) ಅಡಿ ಪರಿಶಿಷ್ಟರ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ (2025-26) ಒದಗಿಸಿದ ಒಟ್ಟು 42,017.51 ಕೋಟಿ ರೂ. ಅನುದಾನದಲ್ಲಿ 11,896.84 ಕೋಟಿ ರೂ.ಯನ್ನು ಪಂಚ `ಗ್ಯಾರಂಟಿ’ ಯೋಜನೆಗಳ ಅನುಷ್ಠಾನಕ್ಕೆ ಹಂಚಿಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಎಸ್ಸಿಎಸ್ಪಿ, ಟಿಎಸ್ಪಿ ಕಾರ್ಯಕ್ರಮಗಳ 2025-26ನೇ ಸಾಲಿನ ಕ್ರಿಯಾ ಯೋಜನೆಯ ಬಗ್ಗೆನೋಡಲ್ ಏಜೆನ್ಸಿಗಳ ಸಭೆ ಇತ್ತೀಚೆಗೆ ನಡೆದಿದೆ. ಕ್ರಿಯಾ ಯೋಜನೆಯಲ್ಲಿ `ಗ್ಯಾರಂಟಿ’ ಯೋಜನೆಗಳಿಗೆ ಅನುದಾನ ಒದಗಿಸಿದ ಮಾಹಿತಿಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಆಗಸ್ಟ್ 5ರಂದು ನಡೆಯಲಿರುವ ಎಸ್ಸಿ, ಎಸ್ಟಿ ರಾಜ್ಯ ಅಭಿವೃದ್ಧಿಪರಿಷತ್ ಸಭೆಯಲ್ಲಿ ಈ ಕ್ರಿಯಾಯೋಜನೆಗೆ ಅನುಮೋದನೆ ನೀಡುವ ಕುರಿತು ಚರ್ಚೆ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ